ಇತರೆ

ಬ್ರಹ್ಮಾವರ: ತಾಯಿಯ ಮಡಿಲಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ತೆಂಗಿನ ಕಾಯಿ ಬಿದ್ದು ಸಾವು 

Views: 154

ಕನ್ನಡ ಕರಾವಳಿ ಸುದ್ದಿ: ತಾಯಿಯ ಮಡಿಲಲ್ಲಿ ಆಟವಾಡುತ್ತಿದ್ದ ಕಂದಮ್ಮನ ಮೇಲೆ ಅಚಾನಕ್ ಆಗಿ ತೆಂಗಿನಕಾಯಿ ಬಿದ್ದು, ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿರುವ ಅತ್ಯಂತ ದಾರುಣ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದಲ್ಲಿ ನಡೆದಿದೆ.

ಬ್ರಹ್ಮಾವರ ತಾಲೂಕಿನ ಚಾಂತಾರು ಹೆರಂಜಾಲು ಗ್ರಾಮದ ನಿವಾಸಿಗಳಾದ ಪ್ರಶಾಂತ್ ಮತ್ತು ಸುಚಿತ್ರಾ ದಂಪತಿಯ ಒಂದುವರೆ ವರ್ಷದ ಗಂಡು ಮಗು ಈ ದುರ್ಘಟನೆಗೆ ಬಲಿಯಾದ ದುರ್ದೈವಿ. ತಾಯಿಯ ಮಡಿಲಲ್ಲಿದ್ದ ಮಗುವಿನ ತಲೆಯ ಮೇಲೆ ತೆಂಗಿನಮರದಿಂದ ಅಚಾನಕ್ ಆಗಿ ತೆಂಗಿನಕಾಯಿ ಉದುರಿ ಬಿದ್ದಿದೆ. ಇದರ ತೀವ್ರತೆಗೆ ಮಗುವಿನ ತಲೆಗೆ ಗಂಭೀರ ಗಾಯವಾಗಿತ್ತು.

ಮಗುವಿಗೆ ಪೆಟ್ಟಾಗುತ್ತಿದ್ದಂತೆ ಗಾಬರಿಗೊಂಡ ಕುಟುಂಬಸ್ಥರು ಮತ್ತು ಸ್ಥಳೀಯರು ಕೂಡಲೇ ಮಗುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದರು. ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ತುರ್ತು ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ಆದರೆ, ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಪುಟಾಣಿ ಕಂದಮ್ಮ ಶನಿವಾರ ಕೊನೆಯುಸಿರೆಳೆದಿದೆ.

ಪ್ರಶಾಂತ್-ಸುಚಿತ್ರಾ ದಂಪತಿಯ ಎರಡನೇ ಪುತ್ರನಾಗಿದ್ದ ಈ ಕಂದಮ್ಮನ ಅಕಾಲಿಕ ಮರಣದಿಂದಾಗಿ ಹೆರಂಜಾಲು ಗ್ರಾಮವೇ ಮರುಗಿದೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Articles

Back to top button
error: Content is protected !!