ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ ಉದ್ಘಾಟನೆ
Views: 25
ಕನ್ನಡ ಕರಾವಳಿ ಸುದ್ದಿ: ಪ್ರಸ್ತುತ ದಿನಗಳಲ್ಲಿ ಯುವ ಸಮುದಾಯ ಉದ್ಯೋಗ ಅರಸಿ ನಗರಗಳತ್ತ ಮುಖ ಮಾಡುವ ವ್ಯವಸ್ಥೆಯನ್ನು ನಾವುಗಳು ಕಾಣುತ್ತಿದ್ದೇವೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಯುವ ಆಸಕ್ತರಿಗೆ ಚೈತನ್ಯ ತುಂಬುವ ಕಾರ್ಯ ಕೋಟ ಪಡುಕರೆ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಅಭಿಪ್ರಾಯಪಟ್ಟರು.
ಕೋಟ ಪಡುಕರೆ ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಮಣೂರು ಗೀತಾನಂದ ಫೌಂಡೇಶನ್ ಸಹಯೋಗದೊಂದಿಗೆ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ ಮಾತನಾಡಿ, ಯುವ ಜನತೆಗೆ ಶೈಕ್ಷಣಿಕ ವ್ಯವಸ್ಥೆಯ ನಡುವೆ ಉದ್ಯೋಗ ಎಂಬುವುದು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಅದರಲ್ಲೂ ಕರಾವಳಿ ಭಾಗದ ಯುವ ಸಮುದಾಯಕ್ಕೆ ಉದ್ಯೋಗ ಮೇಳ ಸುವರ್ಣಾವಕಾಶ ಕಲ್ಪಿಸುವ ಮೇಳವಾಗಿ ರೂಪುಗೊಂಡು ಭದ್ರ ಭವಿಷ್ಯ ನಿರ್ಮಾಣಕ್ಕೆ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ 15 ಕ್ಕೂ ಅಧಿಕ ರಾಜ್ಯದ ಪ್ರಸಿದ್ಧ ಕಂಪನಿಗಳು ಭಾಗಿಯಾಗಿದವು.
ಸಭೆಯಲ್ಲಿ ಐಕ್ಯೂಎಸಿ ವಿಭಾಗದ ಸುಬ್ರಹ್ಮಣ್ಯ ಎ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಮೇಶ್ ಆಚಾರ್,ವಿದ್ಯಾರ್ಥಿ ಪ್ಲೇಸ್ ಮೆಂಟ್ ಸೇಲ್ ಸಂಯೋಜಕಿ ಪ್ರೀತಿಕಾ ಇದ್ದರು. ಉಪನ್ಯಾಸಕ ರಾಮಚಂದ್ರ ಭಟ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.






