ಉಡುಪಿ: ನೇಜಾರು ಬಳಿ ರಸ್ತೆ ಅಪಘಾತ; ಶಾಲಾ ವಿದ್ಯಾರ್ಥಿ ಸಾವು
Views: 30
ಕನ್ನಡ ಕರಾವಳಿ ಸುದ್ದಿ: ಇಲ್ಲಿನ ನೇಜಾರು ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಅಬ್ದುಲ್ ರೆಹಮಾನ್ (12) ಮೃತ ಬಾಲಕ.
ಹೂಡೆ ಸಾಲಿಹಾತ್ ಪಿ.ಯು. ಕಾಲೇಜಿನ ಪ್ರಾಧ್ಯಾಪಕಿ ಮುಸರಥ್, ತನ್ನ ಇಬ್ಬರು ಮಕ್ಕಳೊಂದಿಗೆ ಶಾಲೆಯಿಂದ ಪುಸ್ತಕ ತೆಗೆದುಕೊಂಡು ಮನೆಗೆ ಬರುತ್ತಿದ್ದಾಗ ನೇಜಾರು ಆಯಿಷಾ ಮಸೀದಿ ಬಳಿ ಅಬ್ದುಲ್ ರೆಹಮಾನ್ ಇಳಿದಿದ್ದ ಎನ್ನಲಾಗಿದೆ. ಅಲ್ಲಿ ರಸ್ತೆ ದಾಟುತ್ತಿದ್ದ ಅಬ್ದುಲ್ ರೆಹಮಾನ್‌ಗೆ ಸಂತೆಕಟ್ಟೆಯಿಂದ ಕೆಮ್ಮಣ್ಣು ಕಡೆಗೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ರಸ್ತೆಗೆ ಎಸೆಯಲ್ಪಟ್ಟು ಆತನ ತಲೆಯ ಹಿಂಬದಿ ಮತ್ತು ಬಲಕಾಲಿಗೆ ಗಂಭೀರ ಗಾಯಗೊಂಡಿದ್ದು, ತತ್‌ಕ್ಷಣ ರೆಹಮಾನ್‌ನನ್ನು ಉಡುಪಿ ಆಸ್ಪತ್ರೆಗೆ ಸಾಗಿಸಲಾಗಿದ್ದರೂ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ.
ಮೃತ ಅಬ್ದುಲ್ ರೆಹಮಾನ್ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು. ಬಾಲಕನ ಅಕಾಲಿಕ ನಿಧನಕ್ಕೆ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.






