ಇತರೆ

ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕೈದಿಯನ್ನು ಗುಂಡಿಕ್ಕಿ ಹೊಡೆದುರುಳಿಸಿದ ಪೊಲೀಸರು

Views: 54

ಕನ್ನಡ ಕರಾವಳಿ ಸುದ್ದಿ: ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಜೈಲು ಕೈದಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಈ ಘಟನೆ ನಡೆದಿದೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಮಲಿಕ್ ಈ ಬಗ್ಗೆ ಮಾತನಾಡಿ, ಮಧ್ಯಾಹ್ನ 1.30ರ ಸುಮಾರಿಗೆ ನಾಲ್ವರು ಪೊಲೀಸ್ ಸಿಬ್ಬಂದಿ ಹೋಶಿಯಾರ್‌ಪುರದ ಸೆಂಟ್ರಲ್ ಜೈಲಿನಿಂದ ಮೂವರು ಕೈದಿಗಳನ್ನು ವೈದ್ಯಕೀಯ ತಪಾಸಣೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆತಂದಾಗ ಈ ಘಟನೆ ಸಂಭವಿಸಿದೆ.

ತಪಾಸಣೆಯ ನಂತರ, ಪೊಲೀಸ್ ತಂಡವು ಕೈದಿಗಳನ್ನು ಮರಳಿ ಜೈಲಿಗೆ ಕರೆದೊಯ್ಯುತ್ತಿತ್ತು. ಈ ವೇಳೆ ಕೈ ಕೋಳ ಹಾಕಲಾಗಿದ್ದರೂ ನಸೀಬ್ ಸಿಂಗ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಕಾನ್ಸ್‌ಟೇಬಲ್ ಜಸ್ದೀಪ್ ಸಿಂಗ್ ಆಂಬ್ಯುಲೆನ್ಸ್ ಕಡೆಗೆ ನಸೀಬ್ ಸಿಂಗ್‌ನನ್ನು ಕರೆದೊಯ್ಯುತ್ತಿದ್ದರು. ಈ ವೇಳೆ ಕೈದಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಜಸ್ದೀಪ್ ಹೇಗೋ ಮಾಡಿ ಆತನನ್ನು ಹಿಡಿದು ನಿಲ್ಲಿಸುವಲ್ಲಿ ಯಶಸ್ವಿಯಾದರು. ಆದರೆ ನಸೀಬ್ ಸಿಂಗ್ ಹರಿತವಾದ ಆಯುಧದಿಂದ ಕಾನ್ಸ್‌ಟೇಬಲ್ ಮೇಲೆ ದಾಳಿ ನಡೆಸಿದ್ದಾನೆ. ಇದರಿಂದಾಗಿ ಜಸ್ದೀಪ್ ಅವರ ಮುಖ, ಕೈ ಮತ್ತು ಕಾಲಿಗೆ ಗಾಯಗಳಾಗಿವೆ. ಈ ವೇಳೆ ಕಾನ್ಸ್‌ಟೇಬಲ್‌ನ ಬಂದೂಕನ್ನು ಕಸಿದುಕೊಳ್ಳಲು ಸಹ ಯತ್ನಿಸಿದ್ದಾನೆ.

ಪೊಲೀಸ್ ಪೇದೆಯು ಆತ್ಮರಕ್ಷಣೆಗಾಗಿ ನೆಲದ ಮೇಲೆ ಗುಂಡು ಹಾರಿಸಿದರು. ಆದರೆ ಆರೋಪಿಯು ಹೆದರಲಿಲ್ಲ. ಓಡಿಹೋಗಲು ಯತ್ನಿಸಿದ್ದಾನೆ. ಆತನನ್ನು ಹಿಡಿಯಲು ಪೇದೆ ಪ್ರಯತ್ನಿಸುವಾಗ ಇಬ್ಬರೂ ಬಿದ್ದಿದ್ದಾರೆ. ಆರೋಪಿ ಮತ್ತೆ ಆಯುಧವನ್ನು ಕಸಿದುಕೊಳ್ಳಲು ಪ್ರಯತ್ನಿಸಿದನು. ನಂತರ ಕಾನ್‌ಸ್ಟೇಬಲ್ ತನ್ನ ರಿವಾಲ್ವರ್‌ನಿಂದ ಹಲವು ಸುತ್ತು ಗುಂಡು ಹಾರಿಸಿದ್ದು, ಅವುಗಳಲ್ಲಿ ಕೆಲವು ಕೈದಿಗೆ ತಗುಲಿವೆ ಎಂದು ಮಲಿಕ್ ತಿಳಿಸಿದ್ದಾರೆ.

ಗಾಯಗೊಂಡ ಕೈದಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆತನ ಮೃತದೇಹವನ್ನು ಸಿವಿಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

 

Related Articles

Back to top button
error: Content is protected !!