ತಾಯಿ ನಿಧನಕ್ಕೆ ಮನನೊಂದು ಮಗು, ಪತ್ನಿ ಬಿಟ್ಟು ಬೆಟ್ಟದಿಂದ ಹಾರಿ ಪಿಡಬ್ಲ್ಯೂಡಿ ಎಂಜಿನಿಯರ್ ಜೀವಾಂತ್ಯ
Views: 25
ಕನ್ನಡ ಕರಾವಳಿ ಸುದ್ದಿ: ತಾಯಿ ನಿಧನರಾದ ಹಿನ್ನೆಲೆ 20 ದಿನದ ಹಸಿಗೂಸು ಹಾಗೂ ಪತ್ನಿಯನ್ನು ಬಿಟ್ಟು ಯುವ ಇಂಜಿನಿಯರ್ ಓರ್ವ ಬೆಟ್ಟದಿಂದ ಹಾರಿ ಜೀವಾಂತ್ಯಗೊಳಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಮಂಜುಪ್ರಸಾದ್ ಮೃತ ವ್ಯಕ್ತಿ. ದೇವರಾಯನದುರ್ಗ ಬೆಟ್ಟದ ಮೇಲಿಂದ ಜಿಗಿದು ದುರಂತ ಅಂತ್ಯ ಕಂಡಿದ್ದಾರೆ.
ಮೂಲತಃ ತುಮಕೂರಿನ ಸತ್ಯಮಂಗಲದ ನಿವಾಸಿಯಾದ ಮಂಜುಪ್ರಸಾದ್ ಎಂಟೆಕ್ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ತಾಯಿಯ ಕನಸಿನಂತೆ ಕಳೆದ ಮೂರು ವರ್ಷಗಳ ಹಿಂದೆ ಪಿಡಬ್ಲ್ಯೂಡಿ ಎಂಜಿನಿಯರ್ ಆಗಿ ಕೆಲಸಗಿಟ್ಟಿಸಿಕೊಂಡಿದ್ದರು. ಪ್ರಸ್ತುತ ಪಾವಗಡ ಪಿಡಬ್ಲ್ಯೂಡಿ ಎಂಜಿನಿಯರ್ ಆಗಿ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ತಾಯಿ ಮತ್ತು ಹೆಂಡತಿ ಜೊತೆಗೆ ಸುಖವಾಗಿದ್ದ ಮಂಜುಪ್ರಸಾದ್ ಒಂದುವರೆ ವರ್ಷದ ಹಿಂದೆ ಅಮ್ಮ ಮೃತಪಟ್ಟ ಬಳಿಕ ಮಾನಸಿಕವಾಗಿ ನೊಂದಿದ್ದರು.
ಸರ್ಕಾರಿ ಕೆಲಸ ಪಡೆದುಕೊಂಡಿದ್ದ ಇವರಿಗೆ ತಾಯಿ ಮೇಲೆ ಅಪಾರ ಪ್ರೀತಿ ಇತ್ತು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಬೆಟ್ಟದಷ್ಟು ಕನಸು ಕೂಡ ಕಂಡಿದ್ದರು. ಆದರೆ ದುರಾದೃಷ್ಟವಶಾತ್ ಅನಾರೋಗ್ಯದಿಂದ ಅವರ ತಾಯಿ ಮೃತಪಟ್ಟಿದ್ದರು. ಆಕೆಯ ಅಗಲಿಕೆಯ ನೋವು ಸಹಿಸಲಾಗದ ಮಂಜುಪ್ರಸಾದ್ ಮನೆ ಮುಂದೆಯೇ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ್ದರು.
ನಂತರ ದಂಪತಿಗೆ ಹೆಣ್ಣು ಮಗು ಜನಿಸಿದ್ದು ಅದೇ ಮಗುವಿನಲ್ಲಿ ತನ್ನ ತಾಯಿಯನ್ನು ನೋಡುವ ಪ್ರಯತ್ನ ಮಾಡುತ್ತಿದ್ದರು. ಆ ಮಗುವಿಗೂ ತಮ್ಮ ತಾಯಿಯ ಹೆಸರಾದ ಪುಟ್ಟಮ್ಮ ಎಂದೇ ನಾಮಕರಣ ಕೂಡಾ ಮಾಡಿದ್ದರು. ಪತ್ನಿಯಲ್ಲಿ ಕೆಲಸ ಇದೆ ಬರ್ತೇನೆ ಎಂದು ಹೋದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ದುಡುಕಿನ ನಿರ್ಧಾರ ಮನೆಯವರಿಗೆಲ್ಲ ಆಘಾತ ತಂದಿದೆ. ಮಗು ಜನಿಸಿ ಕೆಲವೇ ದಿನಗಳಾಗಿದ್ದು ಬಾಣಂತಿ ಪತ್ನಿ ಕೂಡಾ ಅವರ ನಿಧನಕ್ಕೆ ಶಾಕ್ ಆಗಿದ್ದಾರೆ,.






