ಹಣಕ್ಕಾಗಿ ಮಹಿಳೆಗೆ ಬೈಕ್ ಡಿಕ್ಕಿ ಹೊಡೆಸಿ ಕೊಲೆ: ಐವರ ಬಂಧನ
Views: 25
ಕನ್ನಡ ಕರಾವಳಿ ಸುದ್ದಿ: ಹಣಕ್ಕಾಗಿ ಸಾಲ ನೀಡಿದ ಮಹಿಳೆಯನ್ನ ಸಿನಿಮೀಯ ಶೈಲಿಯಲ್ಲಿ ಅಪಘಾತವೆಸಗಿ ಹತ್ಯೆ ಮಾಡಿದ ಬಳಿಕ ತಾವೇ ಘಟನೆ ಬಗ್ಗೆ ದೂರು ನೀಡಿ ಸಾಚಾತನ ಮೆರೆದಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಜಯಲಕ್ಷ್ಮೀ ಕೊಲೆಯಾದ ಮಹಿಳೆ. ಕೃತ್ಯ ಸಂಬಂಧ ಪ್ರದೀಪ್, ರಾಕೇಶ್, ಮಂಜುನಾಥ್, ಚೇತನ್, ಪ್ರದೀಪ್ ಮತ್ತು ಯೋಹಾನ್ ಎಂಬುವರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಏ.21ರಂದು ಕುರುಬರಹಳ್ಳಿಯ ಪೈಪ್ ರಸ್ತೆಯಲ್ಲಿ ಮಹಾಲಕ್ಷ್ಮೀ ನಡೆದುಕೊಂಡು ಹೋಗುವಾಗ ಪೂರ್ವಸಂಚಿನಂತೆ ಆರೋಪಿ ರಾಕೇಶ್, ವೇಗವಾಗಿ ಬೈಕ್ ನಲ್ಲಿ ಬಂದು ಅಪಘಾತವೆಸಗಿದ್ದ. ಇನ್ನಿತರ ಆರೋಪಿಗಳು ಆಟೊದಲ್ಲಿ ಬಂದು ರಕ್ಷಣೆ ಮಾಡುವ ನೆಪದಲ್ಲಿ ಆಸ್ಪತ್ರೆಗೂ ಕರೆದೊಯ್ದಿದ್ದರು. ಗಾಯಗೊಂಡ ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೇ ಏ.27ರಂದು ವಿಜಯಲಕ್ಷ್ಮೀ ಮೃತಪಟ್ಟಿದ್ದರು. ಈ ಸಂಬಂಧ ವಿಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿ ಸೆರೆಯಾಗಿದ್ದ ಅಪಘಾತದ ದೃಶ್ಯ ಕೂಲಂಕಷವಾಗಿ ಪರಿಶೀಲಿಸಿದಾಗ ಅಪಘಾತ ನಾಟಕೀಯವಾಗಿ ನಡೆದಿರುವ ಬಗ್ಗೆ ಗಮನಕ್ಕೆ ಬಂದಿತ್ತು. ಉದ್ದೇಶಪೂರ್ವಕವಾಗಿ ವೇಗವಾಗಿ ತೆರಳಿ ನೇರವಾಗಿ ವಿಜಯಲಕ್ಷ್ಮೀಗೆ ಬೈಕ್ ಸವಾರ ಗುದ್ದಿರುವುದನ್ನು ಸಂಚಾರ ಪೊಲೀಸರು ಕಂಡುಕೊಂಡಿದ್ದರು. ತನ್ನ ಮೇಲೆ ಅನುಮಾನ ಬಾರದಿರಲು ಅಪಘಾತ ನಡೆದ ಎರಡು ದಿನಗಳ ನಂತರ ಆರೋಪಿ ರಾಕೇಶ್, ತಾನೇ ಮಹಿಳೆಯನ್ನ ಕಾಪಾಡಿದ್ದು, ಆಕ್ಸಿಡೆಂಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ನೀಡಿದ್ದ.
ಮತ್ತೊಂದೆಡೆ ರಕ್ಷಣೆ ನೆಪದಲ್ಲಿ ಮಹಿಳೆಯನ್ನು ಆಟೊದಲ್ಲಿ ಕೂರಿಸಿಕೊಂಡಾಗ ಆಕೆಯ ಪರ್ಸ್ ನಲ್ಲಿದ್ದ ಮನೆ ಕೀಯನ್ನು ಆರೋಪಿ ಪ್ರದೀಪ್ ತೆಗೆದುಕೊಂಡಿದ್ದ. ನೇರವಾಗಿ ಆಕೆಯ ಮನೆಗೆ ಬಂದು ಹಣಕ್ಕಾಗಿ ಶೋಧ ನಡೆಸುವಾಗ ಮನೆ ಮಾಲೀಕರು ಅನುಮಾನ ವ್ಯಕ್ತಪಡಿಸಿದ್ದರು. ವಿಜಯಲಕ್ಷ್ಮೀ ಅವರ ಆಧಾರ್ ಕಾರ್ಡ್ ಗಾಗಿ ಬಂದಿರುವುದಾಗಿ ಹೇಳಿ ಕ್ಷರ್ಣಾಧದಲ್ಲಿ ಕಾಲ್ಕಿತ್ತಿದ್ದ. ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಮನೆ ಮಾಲೀಕರು ಮಹಾಲಕ್ಷ್ಮೀ ಲೇಔಟ್ ಪೊಲೀಸರಿಗೆ ಕಳ್ಳತನ ಯತ್ನದ ದೂರು ನೀಡಿದ್ದರು.
ಹತ್ಯೆಗೆ ಕಾರಣವೇನು ?: ಕುರುಬರಹಳ್ಳಿ ನಿವಾಸಿ ವಿಜಯಲಕ್ಷ್ಮಿ ಒಬ್ಬಂಟಿಯಾಗಿದ್ದು ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಹತ್ಯೆಯಾದ ಮಹಿಳೆಗೆ ಹಲವು ವರ್ಷಗಳಿಂದ ಪರಿಚಯಸ್ಥನಾಗಿದ್ದ ಸ್ಥಳೀಯ ನಿವಾಸಿ ಚೇತನ್ ಆಕೆಯ ಬಳಿ ಸಾಲ ಪಡೆದುಕೊಂಡಿದ್ದ. ಮಹಿಳೆ ಬಳಿ ಹಣವಿದೆ ಎಂದು ಭಾವಿಸಿ ಸಹಚರ ಪ್ರದೀಪ್ಗೆ ಹೇಳಿದ್ದ. ಇತರ ಆರೋಪಿಗಳು ಸಹ ಒಗ್ಗೂಡಿ ಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾಗಿದ್ದರು. ಕಳ್ಳತನ ಯತ್ನ ಪ್ರಕರಣದಲ್ಲಿ ಮೊದಲು ಪ್ರದೀಪ್ ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯದ ಬಗ್ಗೆ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಇನ್ನಿತರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






