ಮನೆಯಿಂದ ಹಣ ತರುವಂತೆ ಮಾನಸಿಕ, ದೈಹಿಕ ಕಿರುಕುಳ, ಹಣದ ಬೇಡಿಕೆ ಹೆಚ್ಚಾದಾಗ ಯುವತಿ ಅನುಮಾನಾಸ್ಪದ ಸಾವು!
Views: 42
ಕನ್ನಡ ಕರಾವಳಿ ಸುದ್ದಿ:ಕಲಬುರ್ಗಿ ಜಿಲ್ಲೆಯ ಹರಸೂರ್ ಗ್ರಾಮದಲ್ಲಿ ವರದಕ್ಷಿಣೆ ಆಸೆಗಾಗಿ ಗೃಹಿಣಿಯೊಬ್ಬರನ್ನು ಹಲ್ಲೆ ಮಾಡಿ ಕೊಲೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. 23 ವರ್ಷದ ಸ್ನೇಹಲತಾ ಸಾವನ್ನಪ್ಪಿದ ದುರ್ದೈವಿ.
ಈ ಸಂಬಂಧ ಮೃತಳ ಪೋಷಕರು ಗಂಡನ ಮನೆಯವರ ವಿರುದ್ಧ ಹತ್ಯೆಯ ಆರೋಪ ಮಾಡಿದ್ದಾರೆ.
ಸುಮಾರು 3 ವರ್ಷಗಳ ಹಿಂದೆ ಸ್ನೇಹಲತಾ ಅವರನ್ನು ಹರಸೂರ್ ಗ್ರಾಮದ ನವೀನ್ ಎಂಬುವವರ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾದ ಆರಂಭದ ಕೆಲವು ತಿಂಗಳು ದಂಪತಿಗಳು ಸುಖವಾಗಿದ್ದರು. ಆದರೆ, ಕಾಲ ಕಳೆದಂತೆ ಗಂಡ ನವೀನ್ ಮತ್ತು ಆತನ ಕುಟುಂಬಸ್ಥರು ತವರು ಮನೆಯಿಂದ ಹಣ ತರುವಂತೆ ಸ್ನೇಹಲತಾಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದರು ಎನ್ನಲಾಗಿದೆ.
ಹಣದ ಬೇಡಿಕೆ ಹೆಚ್ಚಾದಾಗ ಸ್ನೇಹಲತಾ ಪೋಷಕರು ಸಾಲ ಮಾಡಿ ಹಣ ನೀಡಿದ್ದರು. ಆದರೂ ಗಂಡನ ಮನೆಯವರ ಹಣದ ದಾಹ ತೀರದ ಕಾರಣ, ಇತ್ತೀಚೆಗೆ ಎರಡು ಕುಟುಂಬಗಳ ನಡುವೆ ರಾಜಿ ಪಂಚಾಯತಿ ನಡೆಸಲಾಗಿತ್ತು. ಪಂಚಾಯತಿಯ ನಂತರ ಸ್ನೇಹಲತಾ ಅವರನ್ನು ಗಂಡನ ಮನೆಗೆ ಕಳುಹಿಸಿಕೊಡಲಾಗಿತ್ತು. ಆದರೆ, ಮನೆಗೆ ಹೋದ ಸಂಜೆಯೇ ಗಂಡನ ಮನೆಯವರು ಮತ್ತೆ ಕಿರುಕುಳ ನೀಡಿ, ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಕಳೆದ ರಾತ್ರಿ ಸ್ನೇಹಲತಾ ಸಾವನ್ನಪ್ಪಿದ್ದು, ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗಂಡನ ಮನೆಯವರು ಪೋಷಕರಿಗೆ ತಿಳಿಸಿದ್ದಾರೆ. ಆದರೆ, ಮೃತದೇಹದ ಕುತ್ತಿಗೆಯ ಮೇಲೆ ನೇಣು ಬಿಗಿದ ಯಾವುದೇ ಗುರುತುಗಳಿಲ್ಲ. ಹೀಗಾಗಿ ಗಂಡನ ಮನೆಯವರೆಲ್ಲರೂ ಸೇರಿ ಹಲ್ಲೆ ಮಾಡಿ ಕೊಲೆ ಮಾಡಿ, ನಂತರ ಆತ್ಮಹತ್ಯೆಯ ನಾಟಕವಾಡುತ್ತಿದ್ದಾರೆ ಎಂದು ಯುವತಿಯ ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಹಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವರದಕ್ಷಿಣೆ ಕಿರುಕುಳ ಮತ್ತು ಹತ್ಯೆ ಎಂಬ ಎರಡೂ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.






