ಬೈಂದೂರು: ಪಡುವರಿಯಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಪ್ರಕರಣ: ನಟೋರಿಯಸ್ ಕಳ್ಳನ ಬಂಧನ
Views: 109
ಕನ್ನಡ ಕರಾವಳಿ ಸುದ್ದಿ: ಬೈಂದೂರಿನ ಪಡುವರಿ ಗ್ರಾಮದ ಗುರುಕಿರಣ್ ಪಟ್ಬಾಲ್ ಅವರ ಮನೆಯ ಬಾಗಿಲನ್ನು ಮುರಿದು ಒಳನುಗ್ಗಿ ಚಿನ್ನಾಭರಣ ಕಳವು ಮಾಡಿರುವ ಪ್ರಕರಣದಲ್ಲಿ ಅಂತಾರಾಜ್ಯ ಕಳ್ಳ ಉಮೇಶ್ ಬಳೆಗಾರ ಮಲ್ಲಾರು ಅವನನ್ನು ಪೊಲೀಸರು ಬಂಧಿಸಿದ್ದಾರೆ.
ಕಳವು ಮಾಡಿದ ಚಿನ್ನಾಭರಣಗಳನ್ನು ಮಧುರೈ ಕಡೆ ಮಾರಾಟ ಮಾಡುವುದಕ್ಕಾಗಿ ಗಟ್ಟಿ ಮಾಡಿಸಿ ಬಚ್ಚಿಟ್ಟಿರುವುದಾಗಿ ಆರೋಪಿ ತಿಳಿಸಿದ್ದರಿಂದ ಮಧುರೈಗೆ ಹೋಗಿ ಸುಮಾರು 2.81 ಲಕ್ಷ ರೂ. ಮೌಲ್ಯದ ಒಟ್ಟು 22 ಗ್ರಾಂ ಚಿನ್ನವನ್ನು ಸ್ವಾಧೀನಪಡಿಸಲಾಯಿತು.
ಈತನ ವಿರುದ್ಧ ತಮಿಳುನಾಡು, ಕೇರಳ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಒಟ್ಟು 36 ಪ್ರಕರಣಗಳು ದಾಖಲಾಗಿದ್ದು, 8 ಪ್ರಕರಣಗಳಲ್ಲಿ ಶಿಕ್ಷೆಯಾಗಿರುತ್ತದೆ. ಇನ್ನೂ 23 ಪ್ರಕರಣಗಳು ಕೇರಳ ತಮಿಳುನಾಡು ಮತ್ತು ಕರ್ನಾಟಕದ ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ, ಸುಬ್ರಹ್ಮಣ್ಯ, ಪುತ್ತೂರು, ಕೊಪ್ಪ, ತೀರ್ಥಹಳ್ಳಿ, ಶಿರಸಿ, ಬಸವನಹಳ್ಳಿ ಚಿಕ್ಕಮಗಳೂರು, ಹಿರಿಯೂರು ಚಿತ್ರದುರ್ಗ, ಶೃಂಗೇರಿ, ಕುಮಟಾ, ಮಲ್ಪೆ ಮತ್ತು ಕಾಪು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಚಾರಣೆಯಲ್ಲಿ ಬಾಕಿ ಇದೆ.
ಕಾರ್ಯಾಚರಣೆಯನ್ನು ಎಚ್.ಡಿ. ಕುಲಕರ್ಣಿ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗರವರ ಮಾರ್ಗದರ್ಶನದಲ್ಲಿ ಶಿವಕುಮಾರ್ ಬಿ., ಸಿಪಿಐ ಬೈಂದೂರು ಅವರ ನೇತೃತ್ವದಲ್ಲಿ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಬೈಂದೂರು ಪೊಲೀಸ್ ಠಾಣೆಯ ಪಿ.ಎಸ್.ಐ. ಸುನೀಲ್ ಕುಮಾರ್ ಬಿ.ವೈ. ಮತ್ತು ನವೀನ ಬೋರಕರ, ಕೊಲ್ಲೂರು ಪೊಲೀಸ್ ಠಾಣೆಯ ಪಿ.ಎಸ್.ಐ. ಅವರಾದ ಭೀಮಾ ಶಂಕರ ಮತ್ತು ವಿನಯ ಕೊರ್ಲಹಳ್ಳಿ ಹಾಗೂ ಬೈಂದೂರು ಪೊಲೀಸ್ ಠಾಣೆಯ ಎಎಸ್‌ಐ ಸೀತಾರಾಮ ಮತ್ತು ಸಿಬಂದಿಯವರಾದ ಚಿದಾನಂದ, ಮಾಳಪ್ಪ ದೇಸಾಯಿ, ತಿಮ್ಮಣ್ಣ ನಾಯ್ಕ, ಕೊಲ್ಲೂರು ಠಾಣೆಯ ಸಿಬಂದಿಯವರಾದ ನಾಗೇಂದ್ರ, ರಾಮ ಪೂಜಾರಿ, ಗಂಗೊಳ್ಳಿ ಠಾಣೆಯ ಸಿಬಂದಿ ಕೃಷ್ಣ, ಸಂದೀಪ್ ಕುರಾಣಿ, ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಬೆರಳು ಮುದ್ರೆ ವಿಭಾಗದ ಪೊಲೀಸ್ ನಿರೀಕ್ಷಕರಾದ ಎಲ್. ಮೋಹನ ಕುಮಾರಿ ಮತ್ತು ಸಿಬಂದಿ, ಜಿಲ್ಲಾ ಪೊಲೀಸ್ ಕಚೇರಿಯ ದಿನೇಶ್ ನಡೆಸಿದರು.






