ಪತ್ನಿ ಜತೆ ಫೋನ್‌ನಲ್ಲಿ ಮಾತನಾಡುತ್ತಿರುವಾಗಲೇ ರಿಯಾದ್‌ನಲ್ಲಿ ಬಾಂಬ್ ದಾಳಿಗೆ ಭಾರತೀಯ ಯುವಕ ಸಾವು
Views: 71
ಕನ್ನಡ ಕರಾವಳಿ ಸುದ್ದಿ: ಸೌದಿ ಅರೇಬಿಯಾದ ರಿಯಾದ್‌ನಲ್ಲಿ 2025ರ ಸೆಪ್ಟೆಂಬರ್‌ನಿಂದ ಉದ್ಯೋಗದಲ್ಲಿದ್ದ ಭಾರತೀಯ ಯುವಕ ರವಿಗೋಪಾಲ್ (26) ಉತ್ತರ ಪ್ರದೇಶದಲ್ಲಿರುವ ಪತ್ನಿ ಜತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗಲೇ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ. ಮನಕಲಕುವ ಈ ದುರ್ಘಟನೆ ಮಾ.18ರ ರಾತ್ರಿ 9.53ರಲ್ಲಿ ನಡೆದಿದೆ.
ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮಣ್ಣುದಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಫೈನ್ ಗ್ರಾಮದ ನಿವಾಸಿ ರವಿಗೋಪಾಲ್ (26) ರಿಯಾದ್‌ನಲ್ಲಿ ಪ್ಲಾಸ್ಟಿಕ್ ಫ್ಯಾಕ್ಟರಿಯೊಂದರಲ್ಲಿ ವಾಹನ ಚಾಲಕನ ಕೆಲಸಕ್ಕೆ ಸೇರಿದ್ದರು.
ಮಾ.18ರಂದು ಕೆಲಸ ಮುಗಿಸಿಕೊಂಡು ಕೊಠಡಿಗೆ ಮರಳಿದ ರವಿಗೋಪಾಲ್ ರಾತ್ರಿ 8.30ರಲ್ಲಿ ಪತ್ನಿ ರಿತು ಅವರಿಗೆ ಕರೆ ಮಾಡಿದ್ದಾರೆ. ದಂಪತಿ ರಾತ್ರಿ 9.53ರವರೆಗೂ ಕುಟುಂಬ ಮತ್ತು ಊರಿನ ವಿಚಾರಗಳನ್ನು ಮಾತನಾಡುತ್ತಾ ಹೋಗಿದ್ದಾರೆ. 9.53ರಲ್ಲಿ ರವಿಗೋಪಾಲ್ ನಿಂತಿದ್ದ ಸ್ಥಳದ ಬಳಿಯೇ ಬಾಂಬ್ ಸ್ಫೋಟಗೊಂಡಿದೆ. ಪತ್ನಿ ರಿತುವಿಗೆ ಸ್ಫೋಟದ ಭಾರೀ ಸದ್ದು ಕೇಳಿಸಿ ಕಿವಿ ಕಿವುಡಾದಂತಾಗಿದೆ. ಮರುಕ್ಷಣವೇ ಕರೆ ಕಡಿತವಾಗಿದೆ.
ರಿಯಾದ್ ನಗರದಲ್ಲಿನ ಬಾಂಬ್ ಸ್ಫೋಟದ ದೊಡ್ಡ ಸದ್ದು, ಅದರ ಬೆನ್ನಲ್ಲೇ ಪತಿಯ ದೂರವಾಣಿ ಸಂಪರ್ಕ ಕಡಿತವಾಗಿ ದ್ದನ್ನು ಕಂಡು ಪತ್ನಿ ರಿತು ಆಘಾತಕ್ಕೊಳಗಾಗಿದ್ದಾರೆ. ಆ ಬಳಿಕ ಹಲವಾರು ಬಾರಿ ಕರೆ ಮಾಡಿದರೂ ಪತಿ ರವಿಯ ಫೋನ್ ಕನೆಕ್ಟ್ ಆಗಿಲ್ಲ, ‘ನೀವು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ಪೋನ್ ನಿಷ್ಕ್ರಿಯವಾಗಿದೆ’ ಎಂಬ ಸಂದೇಶವಷ್ಟೇ ಬಂದಿವೆ. ರಿತು ಮತ್ತು ಕುಟುಂಬದವರು ಆತಂಕದಲ್ಲೇ ರಾತ್ರಿ ಕಳೆದಿದ್ದಾರೆ. ಮರು ದಿನ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ರವಿಯ ಸ್ನೇಹಿತ ರಾಮ್ ನಿವಾಸ್ ಕರೆ ಮಾಡಿ, ‘ ರಿಯಾದ್ ನಗರದ ಮೇಲೆ ಇರಾನ್ ಬುಧವಾರ ರಾತ್ರಿ ನಡೆಸಿದ ಬಾಂಬ್ ದಾಳಿಯಲ್ಲಿ ರವಿ ಹತನಾದ’ ಎಂದು ಮಾಹಿತಿ ನೀಡಿದ್ದಾರೆ. ಆಗಲಷ್ಟೇ ರವಿಗೋಪಾಲ್ ಇನ್ನಿಲ್ಲ ಎಂಬುದು ಕುಟುಂಬಕ್ಕೆ ದೃಢಪಟ್ಟಿದೆ.
ರಿಯಾದ್‌ನಿಂದ 1400 ಕಿಮೀ ದೂರದ ಇನ್ನೊಂದು ನಗರ ದಲ್ಲಿ ರವಿಗೋಪಾಲ್ ಸಂಬಂಧಿ ಯುವಕನೂ ಕೆಲಸಕ್ಕಿದ್ದಾನೆ. ಉತ್ತರ ಪ್ರದೇಶದ ಹಲವಾರು ನಗರಗಳ ಸಾವಿರಾರು ಯುವಕರು ಸೌದಿ ಅರೇಬಿಯಾದ ರಾಜಧಾನಿ ನಗರ ರಿಯಾದ್ ಸೇರಿದಂತೆ ಹಲವು ನಗರಗಳಲ್ಲಿ ವಿವಿಧ ಉದ್ಯೋಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಬದುಕು ಅರಸಿ ಹೋಗಿದ್ದ ರವಿ
20200 ಸೆಪ್ಟೆಂಬರ್‌ನಲ್ಲಿ ರವಿಗೋಪಾಲ್-ರಿತು ಮದುವೆಯಾಗಿತ್ತು. ದಂಪತಿಗೆ 4 ವರ್ಷದ ಪುತ್ರನಿದ್ದಾನೆ. ರವಿಯ ತಂದೆ-ತಾಯಿಗೆ ವಯಸ್ಸಾಗಿದ್ದು, ಕುಟುಂಬ ರವಿಯ ದುಡಿಮೆಯನ್ನೇ ಆಧರಿಸಿತ್ತು. ಹಾಗಾಗಿಯೇ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಬಾಫೈನ್ ಗ್ರಾಮದ ನಿವಾಸಿ ರವಿಗೋಪಾಲ್ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಉದ್ಯೋಗ ಆರಸಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಆದರೆ, ಅವರ ಬದುಕೇ ಇರಾನ್ ಬಾಂಬ್ ಸ್ಪೋಟದಲ್ಲಿ ಕೊನೆಗೊಂಡಿದೆ. ರವಿಗೋಪಾಲ್ ಸೇರಿದಂತೆ ಈವರೆಗೆ 6 ಭಾರತೀಯರು ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧಕ್ಕೆ ಬಲಿಯಾಗಿದ್ದಾರೆ. ಒಬ್ಬರು ಕಣ್ಮರೆಯಾಗಿದ್ದಾರೆ.






