ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಉದ್ಯಮಿ ನಾಪತ್ತೆ:ಲಾಡ್ಜ್ ನಲ್ಲಿ ಶವವಾಗಿ ಪತ್ತೆ
Views: 60
ಕನ್ನಡ ಕರಾವಳಿ ಸುದ್ದಿ: ಕಲ್ಲಡ್ಕದಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಉದ್ಯಮ ನಡೆಸುತ್ತಿದ್ದ ಯುವಕನೊಬ್ಬ ಸಂಪಾಜೆ ಸಮೀಪದ ಗೂನಡ್ಕದ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹೊರವಲಯದ ಬೊಂಡಾಲ ಶಾಂತಿಗುಡ್ಡೆ ನಿವಾಸಿ ನಾರಾಯಣ ಕುಲಾಲ್ ಅವರ ಪುತ್ರ ತಿಲಕರಾಜ್ (28) ಮೃತಪಟ್ಟ ದುರ್ದೈವಿ. ಇವರು ಕಲ್ಲಡ್ಕದಲ್ಲಿ ಸ್ವಂತ ಉದ್ದಿಮೆ ನಡೆಸುತ್ತಿದ್ದರು.
ತಿಲಕರಾಜ್ ಅವರು ಮಾರ್ಚ್ 19ರಂದು ಅನಂತಾಡಿಯಲ್ಲಿ ಕೆಲಸದ ನಿಮಿತ್ತ ಮೆಟೀರಿಯಲ್ ತಲುಪಿಸಿ ಬಂದಿದ್ದರು.ಆದರೆ, ಮಾರ್ಚ್ 20ರ ಸಂಜೆಯಿಂದ ಅವರು ಮನೆಯವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಗಾಬರಿಗೊಂಡ ಕುಟುಂಬಸ್ಥರು ಅವರ ಹುಡುಕಾಟ ನಡೆಸುತ್ತಿದ್ದರು. ಈ ನಡುವೆ ತಿಲಕರಾಜ್ ಅವರು ತಮ್ಮ ಕಾರಿನಲ್ಲಿ ಮಡಿಕೇರಿ ರಸ್ತೆಯ ಮೂಲಕ ಪ್ರಯಾಣಿಸಿ, ಬುಧವಾರ (ಮಾ. 20) ಸಂಜೆ ಗೂನಡ್ಕದ ಲಾಡ್ಜ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರು.
ಗುರುವಾರ (ಮಾ. 21) ಬೆಳಗ್ಗೆ ಎಷ್ಟು ಹೊತ್ತಾದರೂ ತಿಲಕರಾಜ್ ತಂಗಿದ್ದ ಕೊಠಡಿಯ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಮಾಜ ಸೇವಕ ತಾಜ್ ಟೀಲಿಯವರ ನೆರವಿನೊಂದಿಗೆ ಕಿಟಕಿಯ ಮೂಲಕ ಒಳಗೆ ಪ್ರವೇಶಿಸಿ ನೋಡಿದಾಗ, ತಿಲಕರಾಜ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮುಂದಿನ ತನಿಖೆ ಮುಂದುವರಿಸಿದ್ದಾರೆ.






