15 ದಿನದ ಮಗು ಅನುಮಾನಾಸ್ಪದ ಸಾವು: ಹೆಣ್ಣು ಮಗು ಎಂದು ಹೊಸುಗೂಸಿಗೆ ವಿಷ ನೀಡಿದ ತಂದೆ ಅರೆಸ್ಟ್
Views: 54
ಕನ್ನಡ ಕರಾವಳಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ 15 ದಿನದ ಹಿಂದೆ ಜನಿಸಿದ್ದ ಹಸುಗೂಸು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದಲ್ಲಿ ತೀವ್ರ ತಿರುವು ಕಂಡಿದ್ದು ಹೆಣ್ಣು ಮಗು ಜನಿಸಿದ್ದಕ್ಕೆ ತಂದೆಯೇ ವಿಷ ನೀಡಿದ್ದಾನೆಂಬ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಭೀಮರಾಯ ಚಿಪ್ಪಾಡೆ ಬಂಧಿತ ಆರೋಪಿಯಾಗಿದ್ದಾನೆ. ಈ ದುರ್ಘಟನೆ ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಮಾರ್ಚ್ 17ರಂದು ನಡೆದಿದೆ. ಈ ಸಂಬಂಧ ಮಗುವಿನ ತಾಯಿ ಶೀಲಾ ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಒಂದು ವರ್ಷದ ಹಿಂದೆ ಭೀಮರಾಯ ಮತ್ತು ಶೀಲಾ ವಿವಾಹವಾಗಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ಭೀಮರಾಯಗೆ ಗಂಡು ಮಗುವಿನ ಆಸೆ ಹೆಚ್ಚಾಗಿತ್ತು. ಆದರೆ 15 ದಿನಗಳ ಹಿಂದೆ ಹೆಣ್ಣು ಮಗು ಜನಿಸಿದ ಹಿನ್ನೆಲೆ ಅಸಮಾಧಾನಗೊಂಡಿದ್ದಾನೆ ಎನ್ನಲಾಗಿದೆ. ಇತ್ತೀಚೆಗೆ ಪತ್ನಿಯ ತವರು ಮನೆಗೆ ಭೇಟಿ ನೀಡಿ ಮಗು ನೋಡಿ ಹಿಂದಿರುಗಿದ ಬಳಿಕ, ಮಗು ಏಕಾಏಕಿ ಅಸ್ವಸ್ಥಗೊಂಡಿದೆ.
ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಿಮ್ಸ್ ನಲ್ಲಿ ಚಿಕಿತ್ಸೆ ನೀಡುವಷ್ಟರಲ್ಲಿ ಮಗು ಮೃತಪಟ್ಟಿದೆ. ಹತ್ತಿ ಬೆಳೆಗೆ ಸಿಂಪಡಣೆ ಮಾಡುವ ವಿಷಕಾರಿ ಔಷಧಿಯನ್ನು ಮಗುವಿಗೆ ನೀಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು.
ಮರಣೋತ್ತರ ಪರೀಕ್ಷೆಗಾಗಿ ಮಗುವಿನ ಶವವನ್ನು ಶವಗಾರಕ್ಕೆ ಸ್ಥಳಾಂತರಿಸಲಾಗಿದ್ದು, ವರದಿ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ತನಿಖೆ ಬಳಿಕ ಬಂಧನ
ಘಟನೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಡಿಸಿಪಿ ನಾರಾಯಣ್ ಭರಮನಿ, ಬೆಳಗಾವಿ ಗ್ರಾಮೀಣ ಎಸಿಪಿ ಹಾಗೂ ಕಾಕತಿ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ನಡುವೆ ಆರೋಪ ಎದುರಿಸುತ್ತಿದ್ದ ಭೀಮರಾಯ ಕೆಲವು ಸಮಯ ನಾಪತ್ತೆಯಾಗಿದ್ದನು.
ಪೊಲೀಸರು ಬಲೆ ಬೀಸಿ ಹುಡುಕಾಟ ನಡೆಸಿದ ಬಳಿಕ ಕೊನೆಗೂ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಸದ್ಯ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.






