ಬೆಳ್ವೆ ಸುರ್ಗೋಳಿಯಲ್ಲಿ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಅಡ್ಡಗೆ ಪೊಲೀಸ್ ದಾಳಿ: ಐದು ಮಂದಿ ಅರೆಸ್ಟ್, ಒಬ್ಬ ಪರಾರಿ
Views: 52
ಕನ್ನಡ ಕರಾವಳಿ ಸುದ್ದಿ: ಅಕ್ರಮ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಅಡ್ಡಗೆ ಶಂಕರನಾರಾಯಣ ಪೊಲೀಸರು ನಡೆಸಿದ ದಾಳಿಯಲ್ಲಿ ಐದು ಮಂದಿಯನ್ನು ಬಂಧಿಸಿ, ಒಬ್ಬ ಆರೋಪಿಯು ಪರಾರಿಯಾಗಿರುವ ಘಟನೆ ಬೆಳ್ವೆ ಗ್ರಾಮದ ಸುರ್ಗೋಳಿ ಪ್ರದೇಶದಲ್ಲಿ ನಡೆದಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಅಕ್ಷಯ ಕುಮಾರಿ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಯಿತು.
ಪೊಲೀಸ್ ಸಿಬ್ಬಂದಿ ಜಯರಾಮ್ ನಾಯ್ಕ ಅವರು ನೀಡಿದ ಮಾಹಿತಿಯಂತೆ, ಸುರ್ಗೋಳಿಯಲ್ಲಿ ಸರ್ಕಾರಿ ಹಾಡಿ ಪ್ರದೇಶದಲ್ಲಿ ಕೆಲವರು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು “ಅಂದರ್-ಬಾಹರ್” ಇಸ್ಪೀಟ್ ಜುಗಾರಿ ಆಟದಲ್ಲಿ ತೊಡಗಿಸಿಕೊಂಡಿದ್ದರು.
ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ, ಮರೆಯಲ್ಲಿ ನಿಂತು ಗಮನಿಸಿದಾಗ ಆರು ಜನರು ಚಾಪೆ ಹಾಸಿಕೊಂಡು ವೃತ್ತಾಕಾರದಲ್ಲಿ ಕುಳಿತು ಹಣ ಪಣವಾಗಿ ಇಟ್ಟು ಜುಗಾರಿ ಆಡುತ್ತಿರುವುದು ದೃಢಪಟ್ಟಿತು.
ತಕ್ಷಣವೇ ಪೊಲೀಸರು ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಿದರು.
ಬಂಧಿತರನ್ನು ಡ್ಯಾನೀಶ್ ನೊರೋನಾ (61), ರಾಘವೇಂದ್ರ ಪೂಜಾರಿ (38), ಹರೀಶ ಶೆಟ್ಟಿ (36), ಚಿರಾಗ್ ಶೆಟ್ಟಿ (34) ಮತ್ತು ಕಿರಣ ಶೆಟ್ಟಿ (39) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಪ್ರಕಾಶ್ ಪೂಜಾರಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಪೊಲೀಸರು ಆರೋಪಿಗಳಿಂದ ನಗದು, ಇಸ್ಪೀಟ್ ಎಲೆಗಳು, ಚಾಪೆ ಹಾಗೂ ಜುಗಾರಿ ಚಟುವಟಿಕೆಗೆ ಬಳಸಲಾಗಿದ್ದ ಮೋಟಾರು ಸೈಕಲ್ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






