ಶ್ರೀ ಲಕ್ಷ್ಮೀ ಎಕ್ಸ್‌ಪ್ರೆಸ್ ಮಾಲಕರಾದ ವಕ್ವಾಡಿ ವಿಠಲ ಶೆಟ್ಟಿ ನಿಧನ
Views: 117
ಕನ್ನಡ ಕರಾವಳಿ ಸುದ್ದಿ: ಶ್ರೀ ಲಕ್ಷ್ಮೀ ಎಕ್ಸ್‌ಪ್ರೆಸ್ ಬಸ್‌ಗಳ ಮಾಲಕರಾದ ಕುಂದಾಪುರ ತಾಲೂಕಿನ ವಕ್ವಾಡಿ ದ್ಯಾಗಳಮನೆ ಮೂಲದ ಪ್ರಸ್ತುತ ಮಂದರ್ತಿ ಹೆಗ್ಗುಂಜೆ ನಿಡೂರು ನಿವಾಸಿ ವಿಠಲ ಶೆಟ್ಟಿ (96) ಮಂದಾರ್ತಿಯ ನಿವಾಸದಲ್ಲಿ ನಿಧನರಾದರು.
ಮೃತರು ಪತ್ನಿ ಇಬ್ಬರು ಪುತ್ರಿಯರು ಹಾಗೂ ಆರು ಮಂದಿ ಪುತ್ರರನ್ನು ಅಗಲಿದ್ದಾರೆ.
ಗ್ರಾಮೀಣ ಭಾಗಕ್ಕೆ ಸಾರಿಗೆ ಸೌಕರ್ಯ ಸಿಗಬೇಕೆಂಬ ಉದ್ದೇಶದಿಂದ ಕಳೆದ 35 ವರ್ಷಗಳ ಹಿಂದೆ ಶ್ರೀ ಲಕ್ಷ್ಮೀ ಎಂಬ ಹೆಸರಿನ ಸಾರಿಗೆ ಉದ್ಯಮ ಸ್ಥಾಪಿಸಿದ ಇವರ ಬಳಿ ಮೊದಲಿಗೆ 5 ಬಸ್ಸುಗಳಿತ್ತು. ಬಳಿಕ ವ್ಯವಹಾರ ಉತ್ತಮಗೊಂಡು ಪುತ್ರನ ಆಡಳಿತದಲ್ಲಿ ಪ್ರಸ್ತುತ 32 ಬಸ್ಸುಗಳು ಸೌಲಭ್ಯ ನೀಡುತ್ತಿದೆ. ಕುಂದಾಪುರ, ಹೆಬ್ರಿ, ಉಡುಪಿ, ಗೋಳಿಯಂಗಡಿ, ಮಂದರ್ತಿ, ಕೊಕ್ಕರ್ಣೆ, ಪೇತ್ರಿ ಮೊದಲಾದ ಭಾಗದಲ್ಲಿ ಲಕ್ಷ್ಮೀ ಎಕ್ಸ್‌ಪ್ರೆಸ್ ಸಂಚರಿಸುತ್ತದೆ. ಧಾರ್ಮಿಕವಾಗಿ ಸಕ್ರೀಯರಾಗಿದ್ದ ಅವರು ದಾನಿಯಾಗಿದ್ದರು. ಮಧ್ಯಾಹ್ನದವರೆಗೆ ಮಂದರ್ತಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ಬಳಿಕ ಹುಟ್ಟೂರು ವಕ್ವಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅಂತಿಮ ದರ್ಶನ ಪಡೆದಿದ್ದು ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.






