ಶಿಕ್ಷಣ

ಸುಮುಖ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ಸಿದ್ದಾಪುರ ಸರ್ಕಾರಿ ಪ್ರೌಢ ಶಾಲೆಗೆ ವಿಜ್ಞಾನ ಪ್ರಯೋಗಾಲಯ ಪೀಠೋಪಕರಣಗಳ ಲೋಕಾರ್ಪಣೆ 

Views: 45

ಕನ್ನಡ ಕರಾವಳಿ ಸುದ್ದಿ: ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಸಂಸ್ಥೆಯಿಂದ ಸಿದ್ದಾಪುರ ಸರ್ಕಾರಿ ಪ್ರೌಢ ಶಾಲೆಗೆ ಉಚಿತವಾಗಿ ನೀಡಲಾದ ವಿಜ್ಞಾನ ಪ್ರಯೋಗಾಲಯಗಳ ಪೀಠೋಪಕರಣಗಳನ್ನು ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಇದರ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಲೋಕಾರ್ಪಣೆ ಮಾಡಿದರು.

ನಂತರ ಅವರು ಮಾತನಾಡಿ, ಹಳ್ಳಿ ಪ್ರದೇಶಗಳ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳು ದೊರಕಿದಾಗ ಗ್ರಾಮೀಣ ವಿದ್ಯಾರ್ಥಿಗಳು ಸಮರ್ಪಕ ಶಿಕ್ಷಣ ಪಡೆಯುವ ಮೂಲಕ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಖಾಸಗಿ ಶಿಕ್ಷಣ ಕ್ಷೇತ್ರದ ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿದ್ದಾಪುರ ಗ್ರಾಮ ಪಂಚಾಯಿತಿಯ  ನಿಕಟಪೂರ್ವ ಸದಸ್ಯ ಶ್ರೀಕಾಂತ್ ನಾಯಕ್ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಸುಮುಖ ಎಜ್ಯುಕೇಷನಲ್‌ ಟ್ರಸ್ಟ್ ಪ್ರವರ್ತಿತ ಜ್ಞಾನಸರಸ್ವತಿ ಪದವಿ ಪೂರ್ವ ಕಾಲೇಜು ತೆರೆದಿರುವುದು ಸಿದ್ದಾಪುರದ ಸುತ್ತಮುತ್ತಲ ಜನರ ಭಾಗ್ಯ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ತೆರೆಯುವ ಧೈರ್ಯ ಮಾಡಿದ ಬಿ.ಎಸ್. ಸುರೇಶ್ ಶೆಟ್ಟಿಯವರ ಜೊತೆಗೆ ನಾವೆಲ್ಲರೂ ನಿಲ್ಲಬೇಕು. ಆ ಮೂಲಕ ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು

ಜ್ಞಾನಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಮರೇಶ್ ಕುಮಾರ್ ಹೆಗ್ಡೆ ಮಾತನಾಡಿ, ಇದೀಗ ಗ್ರಾಮೀಣ ಭಾಗವಾದ ಸಿದ್ದಾಪುರದಲ್ಲಿ ಸುಸಜ್ಜಿತ ಪದವಿ ಪೂರ್ವ ಕಾಲೇಜು ಆರಂಭಗೊಂಡಿದ್ದು, ಸುತ್ತ ಮುತ್ತಲಿನ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ದಾನಿಗಳಾದ ಬಿ.ಎಸ್.ಸುರೇಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಜ್ಞಾನಸರಸ್ವತಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಹರ್ಷ ಶೆಟ್ಟಿ, ಎಸ್.ಡಿಎಂಸಿ ಸದಸ್ಯರಾದ ಅಮೃತಾ, ರೇಖಾ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಪ್ರಭಾರ ಮುಖ್ಯೋಪಾದ್ಯಾಯ ಉದಯಕುಮಾ‌ರ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕ ಸನತ್ ಕುಮಾರ್ ಶೆಟ್ಟಿ ವಂದಿಸಿದರು. ಶಿಕ್ಷಕಿ ವಸಂತಿ ಭಟ್ ನಿರೂಪಿಸಿದರು.

Related Articles

Back to top button
error: Content is protected !!