ಕುಂದಾಪುರ: ದೇವಸ್ಥಾನದ ಗೆಂಡೋತ್ಸವಕ್ಕೆ ಹೋದಾಗ ಮನೆಯ ಬೀಗ ಮುರಿದು ಕಳ್ಳತನ
Views: 110
ಕನ್ನಡ ಕರಾವಳಿ ಸುದ್ದಿ: ದೇವಸ್ಥಾನದ ಗೆಂಡೋತ್ಸವ ಕಾರ್ಯಕ್ರಮಕ್ಕೆ ಮನೆಯವರು ಹೋದಾಗ ಕಳ್ಳರು, ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿರುವ ಘಟನೆ ಕುಂದಾಪುರ ತಾಲೂಕಿನ ಬೇಳೂರಿನಲ್ಲಿ ನಡೆದಿದೆ.
ಬೇಳೂರು ಗ್ರಾಮದ ಗುಳ್ಳಾಡಿ ಹೊಸಿಮನೆಯ ನಿವಾಸಿ ಸತೀಶ ಶೆಟ್ಟಿ (54) ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮಾರ್ಚ್ 8ರಂದು ರಾತ್ರಿ ರಾವುತೇಶ್ವರ ದೇವಸ್ಥಾನದಲ್ಲಿ ಗೆಂಡೋತ್ಸವ ಕಾರ್ಯಕ್ರಮವಿದ್ದ ಕಾರಣ, ಸತೀಶ ಶೆಟ್ಟಿಯವರು ರಾತ್ರಿ 10:00 ಗಂಟೆಗೆ ಹೆಂಡತಿ ಮತ್ತು ಮಗಳೊಂದಿಗೆ ಮನೆಗೆ ಬೀಗ ಹಾಕಿ ದೇವಸ್ಥಾನಕ್ಕೆ ತೆರಳಿದ್ದರು.
ಪೂಜೆ ಮುಗಿಸಿ ರಾತ್ರಿ 01:00 ಗಂಟೆ ಸುಮಾರಿಗೆ ವಾಪಸ್ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರು ಮನೆಯ ಮುಖ್ಯ ದ್ವಾರದ ಬೀಗವನ್ನು ಮುರಿದು ಒಳನುಗ್ಗಿದ್ದಲ್ಲದೆ, ಹಿಂಬದಿಯ ಬಾಗಿಲನ್ನು ಕೂಡ ಜಖಂಗೊಳಿಸಿದ್ದಾರೆ.
ಮಲಗುವ ಕೋಣೆಯಲ್ಲಿದ್ದ ಗೋದ್ರೇಜ್ ಕಪಾಟನ್ನು ತೆರೆದ ಕಳ್ಳರು, ಅದರಲ್ಲಿದ್ದ 2,35,000/- ರೂಪಾಯಿ ನಗದು, ಅಂದಾಜು 7 ಗ್ರಾಂ ತೂಕದ ಒಂದು ಚಿನ್ನದ ಬ್ರಾಸ್ ಲೈಟ್ ಹಾಗೂ 12 ಗ್ರಾಂ ತೂಕದ ಒಂದು ಕಿವಿಯ ಬೆಂಡೋಲೆಯನ್ನು ಕಳವು ಮಾಡಿದ್ದಾರೆ. ಕಳುವಾದ ಒಟ್ಟು ಸೊತ್ತುಗಳ ಮೌಲ್ಯ ಸುಮಾರು 5,35,000/- ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಕುರಿತು ಸತೀಶ ಶೆಟ್ಟಿ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






