ಯುವಜನ

ಪ್ರೀತಿಸಿದವಳಿಂದ ಫೋನ್ ಕರೆ, ಸಂದೇಶಗಳಿಗೆ ಪ್ರತಿಕ್ರಿಯೆ ಇಲ್ಲ:  ಒಮಾನ್‌ನಲ್ಲಿ ಮನನೊಂದ ಯುವಕ ಆತ್ಮಹತ್ಯೆ 

Views: 29

ಕನ್ನಡ ಕರಾವಳಿ ಸುದ್ದಿ: ಪ್ರೇಮ ವೈಫಲ್ಯದಿಂದ ಮನನೊಂದು ಮಂಗಳೂರಿನ ಯುವಕನೊಬ್ಬ ಒಮಾನ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ವರದಿಯಾಗಿದೆ.

ಮೃತ ಯುವಕನನ್ನು ಸೋಮೇಶ್ವರ ನಿವಾಸಿ, ಚಂದ್ರ ಮತ್ತು ದೀಪಾ ದಂಪತಿಯ ಪುತ್ರ ಪುನೀತ್ ಪೂಜಾರಿ (32) ಎಂದು ಗುರುತಿಸಲಾಗಿದೆ.

ಪುನೀತ್ ಕಳೆದ ಒಂದೂವರೆ ವರ್ಷದಿಂದ ಒಮಾನ್‌ನಲ್ಲಿರುವ ಲಿಫ್ಟ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದನು. ಸುಮಾರು ಒಂದೂವರೆ ತಿಂಗಳ ಹಿಂದಷ್ಟೇ ಊರಿಗೆ ಬಂದು, ರಜೆ ಮುಗಿಸಿ ಆತ ಮರಳಿ ಒಮಾನ್‌ಗೆ ತೆರಳಿದ್ದನು.

ಪುನೀತ್ ಕಳೆದ ನಾಲ್ಕು ವರ್ಷಗಳಿಂದ ಉರ್ವಾ ಮೂಲದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಯುವತಿ ಪುನೀತ್‌ನ ಫೋನ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ ಹಾಗೂ ಸಂದೇಶಗಳಿಗೂ (ಮೆಸೇಜ್) ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದರಿಂದ ತೀವ್ರವಾಗಿ ಮನನೊಂದಿದ್ದ ಆತ, ಪ್ರೀತಿ ದೂರವಾದ ನೋವಿನಲ್ಲಿ ವಿದೇಶದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ಮೃತದೇಹ ಬರುವುದು ವಿಳಂಬ ಸಾಧ್ಯತೆ: ಪ್ರಸ್ತುತ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಹಾಗೂ ಅಶಾಂತಿಯ ವಾತಾವರಣ ನೆಲೆಸಿರುವುದರಿಂದ, ಒಮಾನ್‌ನಲ್ಲಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳ್ಳಲು ಹೆಚ್ಚಿನ ಸಮಯಾವಕಾಶ ಬೇಕಾಗುವ ಸಾಧ್ಯತೆಯಿದೆ. ಹೀಗಾಗಿ ಮೃತದೇಹ ತಾಯ್ನಾಡಿಗೆ ತಲುಪುವುದು ವಿಳಂಬವಾಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

Related Articles

Back to top button
error: Content is protected !!