ಯುವಜನ

ಬೆಂಗಳೂರು ಪೈಶಾಚಿಕ ಕೃತ್ಯ:19 ಕಾಲೇಜು ಯುವತಿಯರಿಗೆ ಮತ್ತು ಬರುವ ಮಾತ್ರೆ, ಡ್ರಗ್ಸ್ ನೀಡಿ ಸಾಮೂಹಿಕ ಅತ್ಯಾಚಾರ

Views: 151

ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ನಗರದಲ್ಲಿ ನಡೆದಿದ್ದ ಕಾಲೇಜು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಅಮೃತಹಳ್ಳಿ ಪೊಲೀಸರು ಭೇದಿಸಿದ್ದು, ತನಿಖೆ ವೇಳೆ ಸ್ಫೋಟಕ ವಿಚಾರಗಳು ಬಯಲಾಗಿವೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಸಕಲೇಶಪುರ ಮೂಲದ ನಿಖಿಲ್ ಮತ್ತು ಆತನಿಗೆ ನೆರವು ನೀಡುತ್ತಿದ್ದ ಪಶ್ಚಿಮ ಬಂಗಾಳದ ಡಿಕ್ಸನ್ ಸಾಂಡ್ರಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇವರು ಕೇವಲ ಒಬ್ಬ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವುದು ಮಾತ್ರವಲ್ಲ ಹಲವರು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆರೋಪಿ ನಿಖಿಲ್ ಬಸವೇಶ್ವರ ನಗರದಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ ಹಾಗೂ ಕಾರ್ ವಾಷಿಂಗ್ ಸೆಂಟರ್ ನಡೆಸುತ್ತಿದ್ದ. ನಿಕಿಲ್ ತನ್ನ ಗ್ಯಾಂಗ್‌ನಲ್ಲಿದ್ದ ಡಿಕ್ಸನ್ ಹಾಗೂ ಇನ್ನಿತರ ಮೂರ್ನಾಲ್ಕು ಹುಡುಗರಿಗೆ ನಗರದ ಪ್ರತಿಷ್ಠಿತ ಕಾಲೇಜುಗಳ ಶ್ರೀಮಂತ ಯುವತಿಯರನ್ನು ಸೆಳೆಯುವ ‘ಟಾಸ್ಕ್’ ನೀಡಿದ್ದ. ಈ ಹುಡುಗರು ಇನ್‌ಸ್ಟಾಗ್ರಾಮ್ ಮೂಲಕ ಯುವತಿಯರ ಜತೆ ಸ್ನೇಹ ಬೆಳೆಸುತ್ತಿದ್ದರು. ಗೆಳೆತನ ಗಾಢವಾದ ಮೇಲೆ, ‘ಜಕ್ಕೂರು ಬಳಿಯ ವಿಲ್ಲಾದಲ್ಲಿ ದೊಡ್ಡ ಪಾರ್ಟಿ ಇದೆ, ಬನ್ನಿ ಎಂಜಾಯ್ ಮಾಡೋಣ’ ಎಂದು ಆಹ್ವಾನಿಸುತ್ತಿದ್ದರು.

ಪಾರ್ಟಿಗೆ ಬರುತ್ತಿದ್ದ ಯುವತಿಯರಿಗೆ ಮೊದಲು ಮದ್ಯ ಹಾಗೂ ಡ್ರಗ್ಸ್ ನೀಡಲಾಗುತ್ತಿತ್ತು. ಕೆಲವು ಯುವತಿಯರು ಆರೋಪಿಗಳ ಆಸೆಗೆ ಒಪ್ಪದಿದ್ದಾಗ, ಅವರಿಗೆ ತಿಳಿಯದಂತೆ ಪಾನೀಯಗಳಲ್ಲಿ ಮತ್ತು ಬರುವ ಮಾತ್ರೆಗಳನ್ನು ಬೆರೆಸಲಾಗುತ್ತಿತ್ತು. ಯುವತಿಯರು ಅರೆಪ್ರಜ್ಞಾವಸ್ಥೆಗೆ ತಲುಪುತ್ತಿದ್ದಂತೆಯೇ ನಿಖಿಲ್ ಮತ್ತು ಆತನ ತಂಡ ಅತ್ಯಾಚಾರ ಎಸಗುತ್ತಿದ್ದರು. ಬಳಿಕ ಮರ್ಯಾದೆಗೆ ಅಂಜಿ ಇದುವರೆಗೆ ಯಾರೂ ದೂರು ನೀಡಿರಲಿಲ್ಲ, ಆದರೆ ಒಬ್ಬ ಧೈರ್ಯಶಾಲಿ ಯುವತಿ ನೀಡಿದ ದೂರಿನಿಂದ ಇಡೀ ಕಾಮುಕರ ತಂಡ ಸಿಕ್ಕಿಬಿದ್ದಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇದುವರೆಗೆ ಸುಮಾರು 19 ಯುವತಿಯರು ಪೊಲೀಸರನ್ನು ಸಂಪರ್ಕಿಸಿ ತಮಗಾದ ಅನ್ಯಾಯವನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಅಮೃತಹಳ್ಳಿ ಪೊಲೀಸರು ಈ ಎಲ್ಲಾ 19 ಸಂತ್ರಸ್ತೆಯರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ನಿಕಿಲ್ ಮತ್ತು ಆತನ ತಂಡ ಕೇವಲ ಕಾಮದ ಹಸಿವಿಗಾಗಿ ಮಾತ್ರವಲ್ಲದೆ, ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರೇ ಎಂಬ ಆಯಾಮದಲ್ಲೂ ತನಿಖೆ ಮುಂದುವರಿದಿದೆ.

Related Articles

Back to top button
error: Content is protected !!