ಕೋಟೇಶ್ವರ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಾದಕ ದ್ರವ್ಯ ದುಷ್ಪರಿಣಾಮ ಕಾರ್ಯಾಗಾರ
Views: 9
ಕನ್ನಡ ಕರಾವಳಿ ಸುದ್ದಿ: ಯುವ ಜನತೆ ಮಾದಕ ದ್ರವ್ಯ ದುಶ್ಚಟಕ್ಕೆ ಬಲಿಯಾಗುತ್ತಿರುವುದು ದೇಶದ ಭವಿಷ್ಯದ ದೃಷ್ಠಿಯಿಂದ ಅಪಾಯಕಾರಿಯಾದ ವಿದ್ಯಮಾನವಾಗಿದೆ. ದೇಶ ಸದೃಢವಾಗಿರಬೇಕಾದರೆ ಯುವ ಜನತೆ ವ್ಯಸನ ಮುಕ್ತರಾಗಿ ತಾನು, ತನ್ನ ಕುಟುಂಬ ಹಾಗೂ ಸಮಾಜವು ಆರೋಗ್ಯ ಪೂರ್ಣವಾಗಿರುವಂತೆ ಅರಿವು ಮತ್ತು ಜಾಗೃತಿ ಹೊಂದಬೇಕಾಗಿದೆ. ಈ ದಿಶೆಯಲ್ಲಿ ವಿದ್ಯಾರ್ಥಿಗಳು ಇಲಾಖೆಯೊಂದಿಗೆ ಕೈ ಜೋಡಿಸಿದಲ್ಲಿ ಭವ್ಯ ಭಾರತದ ನಿರ್ಮಾಣ ಸಾಧ್ಯವೆಂದು ಉಡುಪಿ ಜಿಲ್ಲೆ ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ಹೇಳಿದರು.
ಅವರು ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಕೋಟೇಶ್ವರ ಇಲ್ಲಿ ಅಬಕಾರಿ ಇಲಾಖೆ, ಐಕ್ಯೂಎಸಿ, ಮಾದಕ ದ್ರವ್ಯ ತಡೆ ಘಟಕ, ಎನ್.ಎಸ್.ಎಸ್., ರೋವರ‍್ಸ್ ಮತ್ತು ರೇಂರ‍್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ “ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು ಮತ್ತು ಎನ್.ಡಿ.ಪಿ.ಎಸ್. ಕಾಯ್ದೆ ಅರಿವು ಕಾರ್ಯಾಗಾರ” ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಉಪವಿಭಾಗದ ಅಬಕಾರಿ ಉಪಧೀಕ್ಷರಾದ ಪ್ರಭುಗೌಡ ಪಾಟೀಲ ಪ್ರಾತ್ಯಕ್ಷಿಕೆಯೊಂದಿಗೆ ಎನ್.ಡಿ.ಪಿ.ಎಸ್. ಕಾಯ್ದೆಯ ಅರಿವು ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ರಾಮರಾಯ ಆಚಾರ್ಯ ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ದುಶ್ಚಟಗಳಿಂದ ದೂರವಿದ್ದು ಆದರ್ಶ ವಿದ್ಯಾರ್ಥಿಗಳಾಗಿ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಬೇಕೆಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಐಕ್ಯೂಎಸಿ ಸಂಚಾಲಕ ನಾಗರಾಜ ಯು., ಎನ್.ಎಸ್.ಎಸ್. ಸಂಚಾಲಕರಾದ ನಿರಂಜನ ಶರ್ಮ, ರೇಂಜರ್ ಲೀಡರ್ ರೋಹಿಣಿ, ಡಾ. ಭಾಗೀರಥಿ ನಾಯ್ಕ, ಡಾ. ಮನೋಹರ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಮಾದಕ ದ್ರವ್ಯ ತಡೆ ಘಟಕದ ಸಂಚಾಲಕ ರಂಜಿತ್ ಪ್ರಸ್ತಾವಿಸಿ ಸ್ವಾಗತಿಸಿದರು. ಪ್ರಥಮ ಬಿ.ಎಸ್ಸಿ. ವಿದ್ಯಾರ್ಥಿನಿಯರು ಪಾಲ್ಗುಣಿ ಮತ್ತು ತಂಡ ಪ್ರಾರ್ಥಿಸಿದರು. ರಶ್ಮಿ ಉಡುಪ ಕಾರ್ಯಕ್ರಮ ನಿರೂಪಿಸಿದರು.ಪಾಲ್ಗುಣಿ ವಂದಿಸಿದರು.






