ಇತರೆ

ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮರಥೋತ್ಸವ ಮತ್ತು ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ

Views: 318

ಕನ್ನಡ ಕರಾವಳಿ ಸುದ್ದಿ: ಶ್ರೀ ಕ್ಷೇತ್ರದಲ್ಲಿ ದಿನಾಂಕ 24.11.2025ನೇ ಸೋಮವಾರ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮರಥೋತ್ಸವ ಮತ್ತು ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ನಡೆಯಲಿದೆ.

ಸ್ವಸ್ತಿ ಶ್ರೀ ವಿಜಯಾಭ್ಯುದಯ ನೃಪ ಶಾಲಿವಾಹನ ಶಕ ವರ್ಷ 1947ನೇ ಶ್ರೀ ವಿಶ್ವಾವಸು ನಾಮ ಸಂವತ್ಸರ ಮಾರ್ಗಶಿರ ಶುದ್ಧ ಚತುರ್ಥೀ ತಾರೀಕು 24-11-2025 ನೇ ಸೋಮವಾರ ಅಭಿಜಿನ್ ಮುಹೂರ್ತದಲ್ಲಿ ಜರುಗಲಿದೆ. ತಾವು ಸಮಿತ್ರ ಬಾಂಧವರೊಡನೆ ಉತ್ಸವಕ್ಕೆ ಆಗಮಿಸಿ, ಶ್ರೀ ವಿನಾಯಕ ದೇವರ ಶ್ರೀಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ. ಶ್ರೀ ದೇವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,

ಶ್ರೀ ಕೆ. ಶ್ರೀ ರಮಣ ಉಪಾಧ್ಯಾಯ ಅನುವಂಶಿಕ ಆಡಳಿತ ಧರ್ಮದರ್ಶಿ

ಶ್ರೀ ಕೆ. ಪದ್ಮನಾಭ ಉಪಾಧ್ಯಾಯ ಅನುವಂಶಿಕ ಧರ್ಮದರ್ಶಿಗಳು

ಶ್ರೀ ಕೆ.ವ್ಯಾಸ ಉಪಾಧ್ಯಾಯ ಮತ್ತು ಸಹೋದರರು ಅನುವಂಶಿಕ ಪರ್ಯಾಯ ಅರ್ಚಕರು

ಶ್ರೀ ಕೆ. ನಿರಂಜನ ಉಪಾಧ್ಯಾಯ ಅನುವಂಶಿಕ ಧರ್ಮದರ್ಶಿಗಳು

ಧಾರ್ಮಿಕ ಕಾರ್ಯಕ್ರಮಗಳು

 21.11.2025 ನೇ ಶುಕ್ರವಾರ ಪೂರ್ವಾಹ್ನ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ತಿವಾಚನ ಗಣಹೋಮ, ಅಥರ್ವಶೀರ್ಷ, ಉಪನಿಷತ್ ಹೋಮ, ಸತ್ಯಗಣಪತಿ ವೃತ, ಮಹಾಪೂಜೆ.

ರಾತ್ರಿ : ರಂಗಪೂಜಾ, ಡೋಲಾರೋಹಣ, ಸುವರ್ಣ ಪಲ್ಲಕ್ಕಿ ಉತ್ಸವ

 22.11.2025ನೇ ಶನಿವಾರ ಪೂರ್ವಾಹ್ನ ಉಪನಿಷತ್ ಕಲಶಾಭಿಷೇಕ, ಗಣಹೋಮ, ಸತ್ಯಗಣಪತಿ ವೃತ, ಮಹಾಪೂಜೆ. ರಾತ್ರಿ : ಪುರಮೆರವಣಿಗೆ, ರಂಗಪೂಜಾ, ಸುವರ್ಣ ಪಲ್ಲಕ್ಕಿ ಉತ್ಸವ

 23.11.2025 ನೇ ಭಾನುವಾರ ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ, ಅಗ್ನಿ ಜನನ, ಗಣಹೋಮ

ರಾತ್ರಿ : ಪುರಮೆರವಣಿಗೆ, ರಂಗಪೂಜಾ, ಸುವರ್ಣ ಪಲ್ಲಕ್ಕಿ ಉತ್ಸವ

 24.11.2025ನೇ ಸೋಮವಾರ ಪೂರ್ವಾಹ್ನ ಯಂತ್ರೋದ್ಧಾರ ಪೂರ್ವಕ “ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ಮತ್ತು ಬ್ರಹ್ಮರಥೋತ್ಸವ’ ಭಜಕರಿಂದ ಪಾನಕ ವಿತರಣೆ. “ಅನ್ನ ಸಂತರ್ಪಣೆ”

ಸಂಜೆ : ಗಂಟೆ 7.00ಕ್ಕೆ ರಥೋತ್ಸವ, ಸುಡುಮದ್ದು ಪ್ರದರ್ಶನ

 25.11.2025ನೇ ಮಂಗಳವಾರ ಪೂರ್ವಾಹ್ನ, ಚೂರ್ಣೋತ್ಸವ ಅವಧೃತ ಸ್ನಾನ, ವಸಂತಾರಾಧನೆ, ಮಂತ್ರಾಕ್ಷತೆ

ಸಾಂಸ್ಕೃತಿಕ ಕಾರ್ಯಕ್ರಮಗಳು

 21.11.2025ನೇ ಶುಕ್ರವಾರ ಅಪರಾಹ್ನ 4.00 ರಿಂದ 6.00 ಗಾನ ಸೌರಭ ಎದೆ ತುಂಬಿ ಹಾಡುವೆನು ಖ್ಯಾತಿಯ ಪ್ರಜ್ಞಾ ಪಿ. ಅಡಿಗ ಅಂಬಲಪಾಡಿ ಉಡುಪಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

ಸಂಜೆ : 6.00 ಯಕ್ಷಗಾನ ಯಕ್ಷ ಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾ ರಂಗ (ರಿ) ಕೋಟ. ಇವರಿಂದ

ಪ್ರಸಂಗ: “ತುಳಸಿ ಜಲಂಧರ”

22.11.2025ನೇ ಶನಿವಾರ ಅಪರಾಹ್ನ 4.00 ರಿಂದ 6.00 ದಾಸಗಾನಾಮೃತ ಜೂನಿಯ‌ರ್ ವಿದ್ಯಾಭೂಷಣ ಖ್ಯಾತಿಯ ಶ್ರೀ ರಾಧಾಕೃಷ್ಣ ಪೆರ್ಲ ಹಾಗೂ ಬಳಗ ಇವರಿಂದ

ಸಂಜೆ : 6.30 ರಿಂದ ಸಾಂಸ್ಕೃತಿಕ ವೈಭವ ಶ್ರೀ ಕಾಂತೇಶ್ವರ ಕಲಾಸಂಘ ಗೋಪಾಡಿ ಇವರ ಸದಸ್ಯರಿಂದ

 23.11.2025ನೇ ಭಾನುವಾರ ಅಪರಾಹ್ನ 4.00 ರಿಂದ 6.00 ನಾಮ್ಮೋತ್ಸವ ವಿದುಷಿ ಧನ್ಯಶ್ರೀ ಭಟ್ ಕಲಾರಾಧನಾ ಸ್ಕೂಲ್ ಆಫ್ ಡ್ಯಾನ್ಸ್ ಹಳೆಯಂಗಡಿ ಮಂಗಳೂರು ಇವರಿಂದ

ಸಂಜೆ : 6.30 ಸಂಗೀತ ಗಾನ ಸಂಭ್ರಮ ತುಳುನಾಡ ಗಾನ ಗಂಧರ್ವ ರಾಜ್ಯಪ್ರಶಸ್ತಿ ವಿಜೇತ, ಶ್ರೀ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ

 24.11.2025ನೇ ಸೋಮವಾರ ಅಪರಾಹ್ನ 3.30 ರಿಂದ 6.00 ಭಕ್ತಿ ಸಂದ್ಯಾ ವಿದ್ವಾನ್ ಶ್ರೀ ಯೋಗಿಶ್ ಕಿಣಿ ಕಾರ್ಕಳ ಹಾಗೂ ಬಳಗದಿಂದ ಸಂಜೆ : 6.00 ರಿಂದ ಸ್ಯಾಕ್ಟೋಫೋನ್ ವಾದನ ಶ್ರೀ ಸತೀಶ್ ದೇವಾಡಿಗ ಹಾಗೂ ಬಳಗ ಸಾಲಿಗ್ರಾಮ ಇವರಿಂದ ರಾತ್ರಿ 9.30 ಯಿಂದ ಯಕ್ಷಗಾನ ಬಯಲಾಟ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಮೂಲ್ಕಿ ದ.ಕ. ಇವರಿಂದ ಪ್ರಸಂಗ ‘ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ”

ವಿಶೇಷ ಸೂಚನೆ: 21.11.2025 ರಿಂದ ದಿನಾಂಕ 23.11.2025 ರ ತನಕ ಅಪರಾಹ್ನ 3.00 ರಿಂದ 4.00 ಗಂಟೆಯ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಲಿರುವುದು.

ಕುಂಭಾಸುರನಿಗೆ ಭೀಮನ ಅಸಿಯಿಂದ ಮರಣ ಸಂಭವಿಸಿದ ಕಾರಣ ಈ ಗೌತಮ ಕ್ಷೇತ್ರವು ಕುಂಭಾಸಿ ಹೆಸರಿನಿಂದ ಸುಪ್ರಸಿದ್ಧವಾಯಿತು. ಆ ಕ್ಷೇತ್ರವೇ ನಾಗಾಚಲವಾಗಿದ್ದು ಇದಕ್ಕೆ ‘ಆನೆಗುಡ್ಡೆ’ ಎಂದು ಕರೆಯಲಾಗುತ್ತದೆ. ಗಣಪತಿಯು ಆನೆ ರೂಪದಲ್ಲಿ ಭೀಮಸೇನನಿಗೆ ಕತ್ತಿಯನ್ನು ಅನುಗ್ರಹಿಸಿದ ಪ್ರದೇಶದಲ್ಲಿ ಆನೆಯಾಕಾರದಲ್ಲಿ ಗಣಪತಿಯು ಉದ್ಭವಿಸಿದನು. ಆದ್ದರಿಂದ ಈ ಕ್ಷೇತ್ರವು ‘ಆನೆಗುಡ್ಡೆ ಎಂದು ಪ್ರಸಿದ್ಧ’ವಾಯಿತು.

ಹಿಂದೆ ಪೌಲಸ್ತ್ಯ ಪ್ರಪೌತ್ರನಾದ ಕುಂಭಾಸುರನೆಂಬ ರಾಕ್ಷಸನು ಶ್ರೀರಾಮನಿಗೆ ಹೆದರಿ ಮಹೇಂದ್ರಗಿರಿಯಲ್ಲಿ ಅಡಗಿಕೊಂಡಿದ್ದನು. ನಂತರ ಅಲ್ಲಿಂದ ಹೊರಟು ನಾರದರ ಮಾತಿನಂತೆ ಈಶ್ವರನನ್ನು ಮೆಚ್ಚಿಸಿ ವರ ಪಡೆದು ವರ ಬಲೋತ್ಕಾರದಿಂದ ಮದೋನ್ಮತನಾಗಿ ಈ ಕ್ಷೇತ್ರಕ್ಕೆ ಬಂದು ಕೈಗೆ ಸಿಕ್ಕಿದ ಜನರನ್ನು ದಂಡಿಸಿ ತನ್ನ ಸೇನಾ ಸಮೇತವಾಗಿ ರಾಜ್ಯ ಸ್ಥಾಪನೆ ಮಾಡಿ ಆಡಳಿತ ಮಾಡ ತೊಡಗಿದನು. ಇದರಿಂದ ಭಯಭೀತರಾದ ಸ್ಥಳೀಯರು ಅಲ್ಲಿಂದ ಓಡಿ ಹೋದರು. ಆ ಸಮಯದಲ್ಲಿ ಪಾಂಡವರು ದ್ರೌಪದಿ ಸಮೇತರಾಗಿ ವನವಾಸಿಗಳಾಗಿ ತೀರ್ಥಯಾತ್ರೆ ಮಾಡುತ್ತಾ ತುಂಗಭದ್ರ ತೀರದಲ್ಲಿ ಇರುವುದನ್ನು ಅರಿತ ಗೌತಮರು ಹಾಗೂ ಇತರೆ ಋಷಿಗಳು ಲೋಕ ಕಂಟಕನಾದ ಕುಂಭಾಸುರನ ಉಪಟಳದ ಬಗ್ಗೆ ವಿವರಣೆ ನೀಡಿ ಅವನು ನೀಡುತ್ತಿರುವ ತೊಂದರೆಗಳನ್ನು ಕುರಿತು ವಿವರಿಸಿದರು. ಅದನ್ನು ಕೇಳಿದ ಧರ್ಮರಾಯನು ಕುಂಭಾಸುರನನ್ನು ಸಂಹರಿಸಲು ಸಹೋದರ ಭೀಮಸೇನನಿಗೆ ಅಪ್ಪಣೆ ನೀಡಿದರು. ಪಾಂಡವರು ಭಾರ್ಗವ ಕ್ಷೇತ್ರಕ್ಕೆ ಬಂದು ಮಧುವನದಲ್ಲಿ ತಂಗಿ ಹರಿಹರ ದರ್ಶನ ಮಾಡಿದರು. ನಂತರ ಸ್ವಲ್ಪ ದಿನ ಅಲ್ಲಿದ್ದು ಅಲ್ಲಿಂದ ನಾಗಾಚಲಕ್ಕೆ ಬಂದು ಗಣೇಶನನ್ನು ಅರ್ಚಿಸಿದರು.

ಸುಪ್ರಸಿದ್ಧ ಕುಂಭಾಸಿಗೆ ‘ಆನೆಗುಡ್ಡೆ’ ಹೆಸರು ಹೇಗೆ ಬಂತು..?

ಅಣ್ಣನ ಮಾತಿನಂತೆ ಭೀಮನು ಯುದ್ಧಕ್ಕೆ ಸನ್ನದ್ಧನಾದನು. ಶಂಕನಾದ ಮಾಡುತ್ತಾ ಕುಂಭಾಸುರ ಇರುವ ಕಡೆ ಯುದ್ಧಕ್ಕೆ ತರಳಿದನು. ಇವರಿಬ್ಬರ ನಡುವೆ ಭಯಂಕರವಾದ ಯುದ್ಧ ನಡೆಯಿತು ಕುಂಭಾಸುರ ಈಶ್ವರನಿಂದ ವರ ಪಡೆದಿದ್ದರಿಂದ ಅವಧ್ಯನಾಗಿಯೇ ಉಳಿದು, ಭೀಮನು ಸರಿಸಮಾನಾಗಿ ಹೋರಾಟ ಮಾಡಿದರು. ಒಂದು ಹಂತದಲ್ಲಿ ಕುಂಭಾಸುರ ಮುನ್ನಡೆಯನ್ನು ಸಾಧಿಸಿದನು. ಇದರಿಂದ ಭೀಮನು ಚಿಂತಿಸುತ್ತಿರುವಾಗ ಅಶರೀರವಾಣಿಯೊಂದು ಕೇಳಿ ಬಂದಿತು. “ವಿಘ್ನೇಶ್ವರನ ಅನುಗ್ರಹದಿಂದ ಪಡೆದ ಕತ್ತಿಯಿಂದ ಅಸಿ ಮಾತ್ರ ಕುಂಭಾಸುರನನ್ನು ಮಣಿಸಬಹುದು” ಎಂದು ತಿಳಿಸಿ ತಾನು.ಕೂಡಲೇ ಭೀಮನು ಗಜರೂಪಿಯಾದ ಗಣೇಶನನ್ನು ಧ್ಯಾನಿಸಿದನು.

ಆಗ “ವಿಘ್ನೇಶ್ವರನು ಆನೆ ರೂಪದಲ್ಲಿ ಕಾಣಿಸಿಕೊಂಡು ಪ್ರಸಾದ ರೂಪದಲ್ಲಿ ಭೀಮನಿಗೆ ಖಡ್ಗವನ್ನು ನೀಡಿದ ಆ ಕತ್ತಿಯಿಂದ ಭೀಮನು ಕುಂಭಾಸುರನನ್ನ ಸಂಹರಿಸಿದನು”. ಹೀಗೆ ಆತನೊಂದಿಗಿದ್ದ ರಾಕ್ಷಸರೆಲ್ಲರೂ ನಿರ್ನಾಮವಾದರು.

ಹೀಗೆ ಕುಂಬಾಸುರನಿಗೆ ಭೀಮನ ಅಸಿಯಿಂದ ಮರಣ ಸಂಭವಿಸಿದ ಕಾರಣ ಈ ಗೌತಮ ಕ್ಷೇತ್ರವು ಕುಂಭಾಸಿ ಹೆಸರಿನಿಂದ ಸುಪ್ರಸಿದ್ಧವಾಯಿತು. ಆ ಕ್ಷೇತ್ರವೇ ‘ನಾಗಾಚಲ’ವಾಗಿದ್ದು ಇದಕ್ಕೆ ‘ಆನೆಗುಡ್ಡೆ’ ಎಂದು ಕರೆಯಲಾಗುತ್ತದೆ.

ಗಣಪತಿಯು ಆನೆ ರೂಪದಲ್ಲಿ ಭೀಮಸೇನನಿಗೆ ಕತ್ತಿಯನ್ನು ಅನುಗ್ರಹಿಸಿದ ಪ್ರದೇಶದಲ್ಲಿ ಆಮೆಯಾಕಾರದಲ್ಲಿ ಗಣಪತಿಯು ಉದ್ಭವಿಸಿದನು. ಆದ್ದರಿಂದ ಈ ಕ್ಷೇತ್ರವು ‘ಆನೆಗುಡ್ಡೆ ಎಂದು ಪ್ರಸಿದ್ಧ’ವಾಯಿತು.

‘ಮೂಲಬಿಂಬ’ ನಿರಾಕಾರ ಮೂರ್ತಿ ‘ಗಣಪತಿ’

ಹೀಗೆ ನಾಗಾಚಲದಲ್ಲಿ ಸ್ವಯಂವ್ಯಕ್ತನಾದ ವಿಶ್ವಂಭರ ರೂಪಿ ಗಣೇಶನನ್ನು ವಿಧಿ ನಿಯಮದಂತೆ ಕ್ಷೇತ್ರಕ್ಕೆ ಬಂದ ಭಕ್ತರು ಭಕ್ತಿ ಪೂರಕವಾಗಿ ಆರಾಧಿಸಿ ಇಷ್ಟಾರ್ಥಗಳನ್ನು ಪಡೆದು ಕೃತಾರ್ಥರಾಗುತ್ತಾರೆ.

ಇಲ್ಲಿನ ಉಪಾಧ್ಯಾಯ ಕುಟುಂಬದವರು ಶ್ರದ್ಧಾ ಭಕ್ತಿಯಿಂದ ಶ್ರೀ ವಿನಾಯಕನನ್ನು ಆರಾಧಿಸಿ, ಶ್ರೀ ದೇವರಲ್ಲಿ ವಿಶೇಷ ಕಲಾ ಸಾನಿಧ್ಯ ನೆಲೆಸುವಂತೆ ಮಾಡಿದರು.

ಆ ದೇವಸ್ಥಾನ ನಂತರ ದಶಕಗಳ ಕಾಲ ಅಸ್ಪಷ್ಟವಾಗಿ ಉಳಿದಿತ್ತು. ಆ ದೇವಸ್ಥಾನವೇ ಈಗ ನಾವು ಕಾಣುವ ಪ್ರತಿದಿನ ಸಹಸ್ರಾರು ಭಕ್ತರು ಭೇಟಿ ನೀಡುವ ‘ಆನೆಗುಡ್ಡೆಯ ವಿನಾಯಕ ದೇವಾಲಯ‘ ಇದಾಗಿದೆ.

ಈ ಕ್ಷೇತ್ರದಲ್ಲಿ ಮೂಲ ಶಿಲೆಯನ್ನು ‘ಮೂಲಬಿಂಬ’ ಎಂದು ಕರೆಯಲಾಗುತ್ತದೆ ಅದು ನಿರಾಕಾರ ಮೂರ್ತಿಯಾಗಿದೆ ಇದಕ್ಕೆ ಕೃತಕವಾಗಲಿ, ನೈಸರ್ಗಿಕವಾಗಲಿ ಕೆತ್ತನೆ ಕೆಲಸವಾಗಿರುವುದಿಲ್ಲ ಆದರೆ, ಈ ವಿಗ್ರಹದಲ್ಲಿ ಮಸುಕಾದ ಆನೆಯ ಸೊಂಡಿಲು ಮಾತ್ರ ಕಂಡುಬರುತ್ತದೆ ಈ ಮೂಲಬಿಂಬವನ್ನು ಭಕ್ತರು ಬೆಳಿಗ್ಗೆ ಮತ್ತು ಮಧ್ಯಾಹ್ನ ಮಹಾಪೂಜೆಯ ಮೊದಲು ಪ್ರತಿದಿನ ಎರಡು ಬಾರಿ ವೀಕ್ಷಿಸಬಹುದಾಗಿದೆ.

ಅಭಿಷೇಕದ ನಂತರ ಗಣಪತಿಗೆ ಮುಖವಾಡ ಧರಿಸಿದ ನಂತರ ಗಣಪತಿಯು ಕುಳಿತಿರುವ ಭಂಗಿಯಲ್ಲಿರುವುದನ್ನು ಕಾಣಬಹುದು. ಇದೇ ಕುಳಿತ ಸ್ಥಿತಿಯಲ್ಲಿ ಉಳಿದ ಭಾಗ ಇಡೀ ರಾತ್ರಿ ಹಾಗೂ ಮರುದಿನ ಬೆಳಿಗ್ಗೆ ನಡೆಯುವ ಅಭಿಷೇಕದ ವರೆಗೆ ಗಣಪತಿ ಕುಳಿತ ಭಂಗಿಯಲ್ಲಿರಲು ಬಯಸುತ್ತಾನೆ. ಮರುದಿನ ಅಭಿಷೇಕದ ನಂತರ ಗಣಪತಿ ಮತ್ತೆ ನಿಲ್ಲುವ ಭಂಗಿಗೆ ಬರುತ್ತಾನೆ.

ಗಣಪತಿಗೆ ಇಷ್ಟಾರ್ಥ ಸೇವೆಗಳು

ಇಲ್ಲಿ ಶ್ರೀ ದೇವರಿಗೆ ಪಂಚ ಕಜ್ಜಾಯ, ಹರಿವಾಣ ನೈವೇದ್ಯ, ಪಂಚಾಮೃತ, ಕಡುಬಿನ ಸೇವೆ, ರಂಗಪೂಜೆ ಇತ್ಯಾದಿ ಸೇವೆಗಳು ನಿರಂತರವಾಗಿ ನಡೆಯುತ್ತದೆ.

ಪ್ರತಿ ಸಂಕಷ್ಟಹರ ಚತುರ್ಥಿಯಂದು ದೇವಾಲಯದ ವತಿಯಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಗಣಯಾಗ ಜರಗುತ್ತದೆ.

ಆನೆಗುಡ್ಡೆ ಶ್ರೀ ಕ್ಷೇತ್ರಕ್ಕೆ ದೂರದ ಊರುಗಳಿಂದ ಬರುವ ಭಕ್ತರಿಗೆ ಅನುಕೂಲವಾಗುವಂತೆ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಮಧ್ಯಾಹ್ನ ಮಹಾಪೂಜೆಯ ನಂತರ ಬರುವ ಭಕ್ತಾದಿಗಳಿಗೆ ಉಚಿತ ಅನ್ನ ಸಂತರ್ಪಣೆ ಇರುತ್ತದೆ.

ಈ ಕ್ಷೇತ್ರಕ್ಕೆ ಹೀಗೆ ಬನ್ನಿ…..

ಈ ದೇವಸ್ಥಾನಕ್ಕೆ ಸುಲಭವಾಗಿ ಆಗಮಿಸುವ ಮಾರ್ಗವಿದೆ ಈ ಪ್ರದೇಶವು ಉಡುಪಿ ಕುಂದಾಪುರದ ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಹತ್ತಿರ ಕುಂದಾಪುರದಿಂದ 5 ಕಿ.ಮೀ. ಉಡುಪಿಯಿಂದ 26 ಕಿಲೋ ಮೀಟರ್ ದೂರದಲ್ಲಿದೆ. ದೇವಸ್ಥಾನದ ಎದುರುಗಡೆ ಮಹಾಲಿಂಗೇಶ್ವರನನ್ನು ಹರಿಹರೇಶ್ವರ ದೇವಾಲಯ ಒಂದು ಪರ್ಲಾಂಗ್ ದೂರದಲ್ಲಿದೆ. ದೇವಸ್ಥಾನದ ಹಿಂಭಾಗದ ವಕ್ವಾಡಿ ಮಾರ್ಗವಾಗಿ ಶ್ರೀ ವಾದಿರಾಜರ ಜನ್ಮ ಕ್ಷೇತ್ರ ಹೂವಿನಕೆರೆಯಲ್ಲಿದೆ.

 

Related Articles

Back to top button
error: Content is protected !!