ಉಡುಪಿ ಶ್ರೀ ಕೃಷ್ಣ ಮಠದ ಹೆಣ್ಣಾನೆ ಸುಭದ್ರೆಯ ಮಾಲಿಕತ್ವದ ವಿವಾದ: ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಕೊನೆಯ ಅವಕಾಶ
Views: 97
ಕನ್ನಡ ಕರಾವಳಿ ಸುದ್ದಿ: ಹೆಣ್ಣಾನೆ ‘ಸುಭದ್ರೆ’ಯ ಮಾಲೀಕತ್ವದ ವಿಚಾರವಾಗಿ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಚನ್ನಬಸಪ್ಪಸ್ವಾಮಿ ಹಿರೇಕಲ್ಮಠ ಸಂಸ್ಥಾನ ಹಾಗೂ ಉಡುಪಿ ಶ್ರೀಕೃಷ್ಣ ಮಠದ ನಡುವಿನ ವಿವಾದ ಕುರಿತ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಶ್ರೀಕೃಷ್ಣ ಮಠಕ್ಕೆ ಹೈಕೋರ್ಟ್ ಕೊನೆಯ ಅವಕಾಶ ನೀಡಿತು.
ಸುಭದ್ರೆಯನ್ನು ಶ್ರೀಕೃಷ್ಣ ಮಠಕ್ಕೆ ಸ್ಥಳಾಂತರಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) 2025ರ ಸೆಪ್ಟಂಬರ್ 10ಕ್ಕೆ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಹಿರೇಕಲ್ಮಠ ಸಂಸ್ಥಾನದ ಪ್ರತಿನಿಧಿ ಎಂ.ಪಿ.ಎಂ.ಚನ್ನಬಸಯ್ಯ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಉಡುಪಿ ಮಠಕ್ಕೆ ಕೊನೆಯ ಅವಕಾಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸುಭದ್ರೆಯ ಆರೈಕೆಯನ್ನು ಸುದೀರ್ಘ 26 ವರ್ಷಗಳ ಕಾಲ ಮಾಡಿದೆ. ಗಾಯಗಳು ಮಾಸದ ಕಾರಣ ಸುಭದ್ರೆಯನ್ನು ಮೊದಲು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಬಳಿಕ ಅದನ್ನು ಹಿರೇಕಲ್ಮಠ ಸಂಸ್ಥಾನದ ಸುಪರ್ದಿಗೆ ನೀಡಲಾಯಿತು. ಈ ಮಧ್ಯೆ, ಸುಭದ್ರೆಯನ್ನು ಶ್ರೀಕೃಷ್ಣ ಮಠಕ್ಕೆ ಹಸ್ತಾಂತರಿಸುವಂತೆ ಅರಣ್ಯಾಧಿಕಾರಿಗಳು ಆದೇಶ ಮಾಡಿದ್ದಾರೆ. ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶದಂತೆ 6 ಮಂದಿ ಪಶು ವೈದ್ಯ ತಜ್ಜರ ತಂಡ ಸುಭದ್ರೆಯ ಆರೋಗ್ಯ ತಪಾಸಣೆ ನಡೆಸಿದ್ದು, ಹೆಣ್ಣಾನೆ ಆರೋಗ್ಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಶ್ರೀಕೃಷ್ಣ ಮಠದ ಪರ ವಕೀಲರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಕೋರಿದರು. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಕೊನೆಯ ಅವಕಾಶ ನೀಡುತ್ತಿರುವುದಾಗಿ ಹೇಳಿದ ನ್ಯಾಯಪೀಠ ನವೆಂಬರ್ 27 ರೊಳಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಶ್ರೀಕೃಷ್ಣ ಮಠದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿತು. ಅಲ್ಲದೇ ಸುಭದ್ರೆಯನ್ನು ಆತುರವಾಗಿ ಸ್ಥಳಾಂತರ ಮಾಡದಂತೆ ಸೆ.23ರಂದು ನೀಡಿದ್ದ ಮಧ್ಯಂತರ ಆದೇಶವನ್ನು ನ್ಯಾಯಪೀಠ ವಿಸ್ತರಿಸಿತು.
ಸುಭದ್ರೆಯನ್ನು 1993ರಿಂದ 2019ರ ವರೆಗೆ ಉಡುಪಿ ಶ್ರೀಕೃಷ್ಣ ಮಠ ಆರೈಕೆ ಮಾಡುತ್ತಿತ್ತು. ನಂತರ ಅದನ್ನು ಹಿರೇಕಲ್ಮಠ ಸಂಸ್ಥಾನಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲದೇ ಹಿರೇಕಲ್ಮಠಕ್ಕೆ ಸುಭದ್ರೆಯ ಮಾಲೀಕತ್ವ ಪ್ರಮಾಣಪತ್ರ ಸಹ ನೀಡಲಾಗಿತ್ತು. ಆದರೆ, ಸುಭದ್ರೆಯನ್ನು ಉಡುಪಿ ಶ್ರೀಕೃಷ್ಣ ಮಠಕ್ಕೆ ಹಸ್ತಾಂತರಿಸಬೇಕು ಎಂದು 2025ರ ಸೆ.10ರಂದು ಆದೇಶ ಹೊರಡಿಸಿದ್ದ ಪಿಸಿಸಿಎಫ್, ಹಿರೇಕಲ್ಮಠಕ್ಕೆ ನೀಡಲಾಗಿದ್ದ ಸುಭದ್ರೆಯ ಮಾಲಿಕತ್ವದ ಪ್ರಮಾಣಪತ್ರ ಸಹ ರದ್ದುಪಡಿಸಿತ್ತು. ಅದನ್ನು ಪ್ರಶ್ನಿಸಿ ಹಿರೇಕಲ್ಮಠ ಸಂಸ್ಥಾನ ಹೈಕೋರ್ಟ್ ಮೆಟ್ಟಿಲೇರಿದೆ.






