ಮದರ್ ತೆರೆಸಾ ಪದವಿಪೂರ್ವ ಕಾಲೇಜು: ಸೃಜನಾತ್ಮಕ ಚಿಂತನೆಗೆ ಚೈತನ್ಯ ತುಂಬಿದ ‘ಬಿಜಿನೆಸ್ ಚಾಂಪ್- 2025’
Views: 242
ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣದ ಮದರ್ ತೆರೆಸಾ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ “ಬಿಸಿನೆಸ್ ಚಾಂಪ್ – 2025” ಸ್ಪರ್ಧೆಯನ್ನು ಆಯೋಜಿಸಿತು. ವಾಣಿಜ್ಯ ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನ, ಸಾಮಾನ್ಯ ಕೌಶಲಗಳು ಹಾಗೂ ಸೃಜನಾತ್ಮಕ ಚಿಂತನೆಯ ಬೆಳವಣಿಗೆಯನ್ನು ಉದ್ದೇಶವಾಗಿಸಿಕೊಂಡ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ನಿಜವಾದ ಜ್ಞಾನೋತ್ಸವವಾಗಿ ಪರಿಣಮಿಸಿತು.
ಆರಂಭಿಕ ಸುತ್ತಿನಲ್ಲಿ ಆಯ್ಕೆಯಾದ ನಾಲ್ವರು ವಿದ್ಯಾರ್ಥಿಗಳು ಅಂತಿಮ ಸುತ್ತಿನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಹಲವು ಹಂತಗಳನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ — ಪ್ರಮುಖ ಉದ್ಯಮಿಗಳ ಗುರುತಿಸುವಿಕೆ, ಬ್ರ್ಯಾಂಡ್ ಲೋಗೋ ಮತ್ತು ಟ್ಯಾಗ್‌ಲೈನ್‌ಗಳ ಪರಿಚಯ, ವಾಣಿಜ್ಯ ಪದಬಂಧ, ಖ್ಯಾತ ವ್ಯಕ್ತಿಗಳ ಜೀವನ ಚರಿತ್ರೆ ಹಾಗೂ ಸಾಧನೆಗಳು, ಸಂಕ್ಷಿಪ್ತ ರೂಪಗಳ ವಿಸ್ತರಣೆ, ಜಾಹೀರಾತುಗಳ ಗುರುತಿಸುವಿಕೆ ಮುಂತಾದ ಹಲವು ವಿಭಾಗಗಳಲ್ಲಿ ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸಲಾಯಿತು.
ಸ್ಪರ್ಧೆಯ ಅಂತಿಮ ಫಲಿತಾಂಶದಲ್ಲಿ ದ್ವಿತೀಯ ಪಿಯುಸಿಯ ಕ್ಷಮಾ ಪ್ರಥಮ ಸ್ಥಾನವನ್ನು, ರಾಶಿ ದ್ವಿತೀಯ ಸ್ಥಾನವನ್ನು, ಅಮೂಲ್ಯ ತೃತೀಯ ಸ್ಥಾನವನ್ನು ಪಡೆದರು.
ಪ್ರತೀ ಶೈಕ್ಷಣಿಕ ವರ್ಷದಲ್ಲಿ ವಾಣಿಜ್ಯ ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲಗಳನ್ನು ಉತ್ತೇಜಿಸಲು ಸಂಸ್ಥೆಯು ಹಮ್ಮಿಕೊಳ್ಳುವ ಹಲವು ಚಟುವಟಿಕೆಗಳಲ್ಲಿ, ಈ ಸ್ಪರ್ಧೆಯು ವಿದ್ಯಾರ್ಥಿಗಳ ಸೃಜನಶೀಲ ಚಿಂತನೆಗೆ ನೂತನ ಕ್ರಿಯಾಶೀಲ ದಾರಿಯನ್ನು ತೋರಿಸಿತು.
ವ್ಯವಹಾರ ಅಧ್ಯಯನ ವಿಭಾಗದ ಉಪನ್ಯಾಸಕಿ ಕುಮಾರಿ ಆಶ್ರಿತಾ ರವರ ಮನೋಹರ ನಿರ್ವಹಣೆ ಹಾಗೂ ಉಪನ್ಯಾಸಕರ ಸಮಗ್ರ ಸಹಕಾರದೊಂದಿಗೆ ಈ ಕಾರ್ಯಕ್ರಮವು ಯಶಸ್ವಿಯಾಗಿ ಸಂಪೂರ್ಣಗೊಂಡಿತು.









