ಇತರೆ

ಆಶ್ರಯ ಬೇಡಿ ಬಂದ ಅಪ್ರಾಪ್ತೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಮೂವರಿಗೆ ಜೈಲು ಶಿಕ್ಷೆ 

Views: 47

ಕನ್ನಡ ಕರಾವಳಿ ಸುದ್ದಿ: ಆಶ್ರಯ ಬೇಡಿ ಬಂದ ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿ, ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಮಹಿಳೆ ಸೇರಿ ಮೂವರಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 10 ಸಾವಿರ ದಂಡ ವಿಧಿಸಿ ಮೈಸೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆನಂದ ಪಿ.ಹೊಗಾಡೆ ತೀರ್ಪು ನೀಡಿದ್ದಾರೆ.

ಕೆ.ಆರ್.ಪೇಟೆ ತಾಲೂಕು ಚಿಕ್ಕನಹಳ್ಳಿಪುರ ಗ್ರಾಮದ ರೇಖಾ, ಶ್ರೀರಂಗಪಟ್ಟಣದ ರಾಘವೇಂದ್ರ, ಪುರ ಗ್ರಾಮದ ಉಮೇಶ್‌ ಶಿಕ್ಷೆಗೆ ಗುರಿಯಾದವರು. ಇತರ ಆರೋಪಿಗಳಾದ ಲೀಲಾವತಿ ಮತ್ತು ಲಲಿತಾ ಅವರನ್ನು ಸನ್ನಡತೆ ಕಾಯ್ದುಕೊಂಡು ಹೋಗುವ ಷರತ್ತಿನ ಮೇರೆಗೆ ಪಿಒ ಕಾಯ್ದೆಯಡಿ ಬಿಡುಗಡೆಗೊಳಿಸಲಾಗಿದೆ. ಉಳಿದವರ ಪೈಕಿ ಗಿರೀಶ್‌ ತಲೆಮರೆಸಿಕೊಂಡಿರುವುದರಿಂದ ಆತನ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು ಶಿವರಾಮು, ಅಭಿಷೇಕ್‌ ಮತ್ತು ಸಿದ್ದರಾಮ ಎಂಬವರು ವಿಚಾರಣೆ ಸಮಯದಲ್ಲೇ ಮೃತಪಟ್ಟಿದ್ದಾರೆ.

ಏನಿದು ಘಟನೆ?: ಪಾಂಡವಪುರ ತಾಲೂಕು ಚಿನಕುರಳಿ ಗ್ರಾಮದ 16 ವರ್ಷದ ಬಾಲಕಿಯನ್ನು ಲೀಲಾವತಿ, ಸಿದ್ದರಾಜು ಮತ್ತು ಲಲಿತಾ ಎಂಬವರು 2020 ಆಗಸ್ಟ್‌ 10ರಂದು ಮಂಡ್ಯ ಜಿಲ್ಲೆ ಹುಲಿವಾಹನ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ್‌ ಜೊತೆ ಬಲವಂತವಾಗಿ ವಿವಾಹ ಮಾಡಿಸಿದ್ದರು. ನಂತರ ಆಕೆ ಮನೆ ಬಿಟ್ಟು ಹೋಗಿ ರಾಘವೇಂದ್ರ ಬಳಿ ಆಶ್ರಯ ಪಡೆದಿದ್ದಳು.

ರಾಘವೇಂದ್ರ ಬಾಲಕಿಯನ್ನು ರೇಖಾ ಎಂಬವರ ಮನೆಗೆ ಕರದು ತಂದು ಬಿಟ್ಟಿದ್ದ. ರೇಖಾ ಬಾಲಕಿಯನ್ನು ಮೈಸೂರಿನ ಭೈರವೇಶ್ವರನಗರದಲ್ಲಿ ಬಾಡಿಗೆ ಮನೆಯಲ್ಲಿರಿಸಿ ವೇಶ್ಯಾವಾಟಿಕೆಗೆ ದೂಡಿ ಹಣ ಸಂಪಾದಿಸುತ್ತಿದ್ದಳು. ನಂತರ ರೇಖಾ ಮತ್ತು ಗಿರೀಶ್‌ ಸೇರಿ ಬಾಲಕಿಯನ್ನು ನಾಲ್ಕು ಸಾವಿರ ಹಣ ಪಡೆದು ಪುರ ಗ್ರಾಮದ ಉಮೇಶನೊಂದಿಗೆ ಕಳುಸಹಿಸಿಕೊಟ್ಟಿದ್ದರು.

ಆತ ಜಮೀನಿನಲ್ಲಿದ್ದ ಮನೆಗೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರವೆಸೆಗಿ, ನಂತರ ಲಾಡ್ಜ್ನಲ್ಲಿರಿಸಿ ವೇಶ್ಯಾವಾಟಿಕೆಗೆ ದೂಡಿ ಹಣ ಸಂಪಾದಿಸುತ್ತಿದ್ದ. ಈ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡದ್ದ ಮೈಸೂರಿನ ಹೆಬ್ಬಾಳು ಠಾಣೆ ಪೊಲೀಸರು ಪ್ರಕರಣವನ್ನು ಮಹಿಳಾ ಠಾಣಾ ಪೊಲೀಸರಿಗೆ ವಹಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಮಹಿಳಾ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಒಂಬತ್ತು ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮೈಸೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆನಂದ ಪಿ. ಹೋಗಾಡೆ ಅವರು ರೇಖಾ, ರಾಘವೇಂದ್ರ ಮತ್ತು ಉಮೇಶ್‌ ಎಂಬ ಅಪರಾಧಿಗಳಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ.ಜಯಂತಿ ವಾದ ಮಂಡಿಸಿದ್ದರು.

Related Articles

Back to top button