ಸಾಂಸ್ಕೃತಿಕ

“ಗಜಮುಖದವಗೆ ಗಣಪಗೆ……….”

Views: 175

ಬಾಲ್ಯದಲ್ಲಿ ಯಕ್ಷಗಾನದ ಗೀಳು – ಭಾಗ 1

– ನಾರಾಯಣ ಶೆಟ್ಟಿಗಾರ್, ಬೆಂಗಳೂರು
ಮೊ. 9845660131

           60-70 ವರ್ಷಗಳ ಹಿಂದೆ ನಮ್ಮ ಬಾಲ್ಯ ಕಾಲದಲ್ಲೂ ಯಕ್ಷಗಾನ ಕಾರ್ಯಕ್ರಮಗಳು ಪ್ರಾರಂಭವಾಗುತ್ತಿದ್ದುದು ಈ ಪದ್ಯದಿಂದಲೇ. ಕೋಡಂಗಿ, ಬಾಲಗೋಪಾಲ, ಸ್ತ್ರೀವೇಷ, ಒಡ್ಡೋಲಗಗಳು ಬಯಲಾಟದಿಂದ ಕಣ್ಮರೆಯಾಗುತ್ತಿದ್ದರೂ, ಗಜಮುಖನೇ ಪ್ರಥಮ ಪೂಜಿತನಾಗಿ ಉಳಿದುಕೊಂಡಿರುವುದು ನಮ್ಮ ಪುಣ್ಯ.
ಆಗಿನ ಕಾಲದಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆ ‘ಅಬ್ಬರ ತಾಳ’ (ಅಬ್ಬರ ಬಿಡ್ತಿಗೆ) ಹಾಕುತ್ತಿದ್ದರು. ಆಗ ಧ್ವನಿವರ್ಧಕಗಳ ಉಪಯೋಗ ಪ್ರಾರಂಭವಾಗದಿದ್ದರೂ, ಶಬ್ಧಮಾಲಿನ್ಯ ಕಡಿಮೆಯಿದ್ದ ಕಾರಣ ಇದು ಸುತ್ತುಮುತ್ತಲ ಹಳ್ಳಿಗಳಿಗೆಲ್ಲಾ ಕೇಳಿಸುತ್ತಿತ್ತು. ಹೀಗಾಗಿ ಆಟದ ಉಚಿತ ಪ್ರಚಾರ ನಡೆದು ಹೋಗುತ್ತಿತ್ತು. ಚಂಡೆ ಶಬ್ಧ ಕೇಳಿದ ಕೂಡಲೆ ನಾವು ಓಡುತ್ತಿದ್ದುದು ನಮ್ಮ ಚಿಕ್ಕಪ್ಪನ ಬಳಿಗೆ. “ಚಿಕ್ಕಪ್ಪ, ಚಿಕ್ಕಪ್ಪ, ಆಟದ ಚಂಡೆ ಕೇಳಿಸುತ್ತಿದೆ. ಇಲ್ಲೇ ಎಲ್ಲೋ ಹತ್ತಿರ ಆಟ. ನಾವು ಹೋಗೋಣ ಚಿಕ್ಕಪ್ಪ.” ನಮ್ಮ ಒತ್ತಾಯಕ್ಕೆ ಚಿಕ್ಕಪ್ಪ ಹೊರಟಂತೆ ಕಂಡರೂ, ಚಿಕ್ಕಪ್ಪನಿಗೆ ಆಟದ ಹುಚ್ಚು ಕಡಿಮೆಯಿಲ್ಲ. ನಮ್ಮ ಬೇಡಿಕೆಯನ್ನೇ ಚಿಕ್ಕಪ್ಪ ಕಾಯುತ್ತಿದ್ದುದೂ ಸುಳ್ಳಲ್ಲ.

.

            ಬೇಗಬೇಗನೆ ಹುಲ್ಲಿನ ಸೂಡಿ ತಯಾರಾಗುತ್ತಿತ್ತು. ರಾತ್ರಿಯ ಊಟವೂ ಬೇಗ ಮುಗಿಯುತ್ತಿತ್ತು. ಚಿಕ್ಕಪ್ಪನ ಮಾರ್ಗದರ್ಶನದಲ್ಲಿ ಮನೆಯ ಹೆಂಗಸರು ಮತ್ತು ಮಕ್ಕಳು ಆಟಕ್ಕೆ ಹೊರಡುತಿದ್ದೆವು. ನೆಲಗಡಲೆ ಕೊಂಡುಕೊಳ್ಳುವುದಕ್ಕೆ ನಾಲ್ಕಾಣೆ ಅಪ್ಪಯ್ಯನಿಂದ ಸ್ಯಾಂಕ್ಷನ್ ಆಗುತ್ತಿತ್ತು. ಶಬ್ಧ ಬಂದ ದಿಕ್ಕನ್ನೇ ಗುರಿಯಾಗಿಸಿಕೊಂಡು ನಾವು ಮುಂದೆ ನಡೆಯುತ್ತಿದ್ದೆವು. ಸ್ವಲ್ಪ ದೂರ ಹೋದ ಮೇಲೆ ದೀಪದ ಬೆಳಕಿನ ಝಳ ಕಣ್ಣಿಗೆ ರಾಚುತ್ತಿತ್ತು. ಆಗ ವಿದ್ಯುತ್ ದೀಪಗಳಿರಲಿಲ್ಲ. ಡೇರೆ ಮೇಳಗಳಲ್ಲಿ ಮಾತ್ರ ಡೈನಮೊ ಉಪಯೋಗಿಸುತ್ತಿದ್ದರು. ಉಳಿದ ಬಯಲಾಟಗಳಲ್ಲಿ ಪೆಟ್ರೋಮೆಕ್ಸ್ ದೀಪಗಳನ್ನು ಬೆಳಗಿಸುತ್ತಿದ್ದರು. (ಅದಕ್ಕೂ ಮೊದಲು ದೊಂದಿ ಬೆಳಕಿನ ಆಟಗಳು ನಡೆಯುತ್ತಿದ್ದವಂತೆ. ಅದರ ಕುರುಹಾಗಿ ಒಂದು ದೊಂದಿ ಬೆಳಕು ರಂಗಸ್ಥಳದಲ್ಲಿ ಇರುತ್ತಿತ್ತು.) ಧ್ವನಿವರ್ಧಕಗಳು ಇಲ್ಲದ ಕಾರಣ ಭಾಗವತರ ಕಂಠತ್ರಾಣದ ನೈಜ ಸತ್ವಪರೀಕ್ಷೆಯಾಗುತ್ತಿತ್ತು. ದೀಪದ ಬೆಳಕು ಕಾಣಿಸುತ್ತಲೇ ನಮ್ಮ ಉತ್ಸಾಹವೂ ಉಕ್ಕೇರುತ್ತಿತ್ತು. ಆಟದ ರಂಗಸ್ಥಳವನ್ನೇ ನೋಡಿದಷ್ಟು ಹರ್ಷಿತರಾಗುತ್ತಿದ್ದೆವು. ಬೇಗಬೇಗ ಹೆಜ್ಜೆ ಹಾಕಿ ರಂಗಸ್ಥಳವನ್ನು ತಲುಪುತ್ತಿದ್ದೆವು.
ಆಗಲೇ ಜನರು ರಂಗಸ್ಥಳದ ಸುತ್ತ ನೆರೆದಿರುತ್ತಿದ್ದರು. ಆಗಿನ ಕಾಲದಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇರುತ್ತಿರಲಿಲ್ಲ. ಹತ್ತಿರದ ಶಾಲೆಯಿಂದ ನಾಲ್ಕಾರು ಬೆಂಚುಗಳನ್ನು ತಂದರೂ, ಅದು ಆಟದ ಮನೆಯವರ ನೆಂಟರು ಮತ್ತು ಶ್ರೀಮಂತ ಆಹ್ವಾನಿತರಿಗೆ ಮಾತ್ರ ಮೀಸಲು. ಜನಸಾಮಾನ್ಯರು ನೆಲದ ಮೇಲೆ ಕುಳಿತುಕೊಳ್ಳಬೇಕು ಅಥವಾ ನಿಂತುಕೊಂಡೇ ಆಟ ನೋಡಬೇಕು. ಚಾಪೆ, ಗೋಣಿ ಚೀಲಗಳನ್ನು ತಂದವರು ಅದನ್ನು ಹಾಸಿಕೊಂಡು ಕುಳಿತುಕೊಳ್ಳುತ್ತಿದ್ದರು. ಕೆಲವು ಆಟದ ಮನೆಯವರು ಸೆಟ್ಟೆ ಗದ್ದೆಯ ಮೇಲೆ ತಳುಹುಲ್ಲನ್ನು ತಳಿದು ಕುಳಿತುಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದುದೂ ಇತ್ತು. ನಾವು ರಂಗಸ್ಥಳಕ್ಕೆ ಆದಷ್ಟು ಹತ್ತಿರ ಜಾಗ ಮಾಡಿಕೊಂಡು ಕುಳಿತುಕೊಳ್ಳುತ್ತಿದ್ದೆವು.


ಆಟ ಎಂದ ಮೇಲೆ ಗರಗರ ಮಂಡಲ, ದೋಸೆ ಚಾ ಹೋಟೆಲ್, ಮುಂಡಕ್ಕಿ ಉಪ್ಕರಿ, ನೆಲಗಡಲೆ ಮತ್ತಿತರ ಮಿಠಾಯಿ ವ್ಯಾಪಾರ ಇರಲೇಬೇಕು. ಆದರೆ ನಮಗೆ ಅದ್ಯಾವುದರ ಬಳಿಗೆ ಹೋಗಲು ಅನುಮತಿ ಇರುತ್ತಿರಲಿಲ್ಲ. ನಾಲ್ಕಾಣೆಯ ನೆಲಗಡಲೆಯಿಂದಲೇ ನಾವೆಲ್ಲರೂ ತೃಪ್ತಿ ಪಡಬೇಕಾಗಿತ್ತು.
ಕೋಡಂಗಿ, ಬಾಲಗೋಪಾಲರು, ಸ್ತ್ರೀವೇಷ, ಒಡ್ಡೋಲಗಗಳು ಮುಗಿದ ನಂತರ ಕಥಾಭಾಗ ಪ್ರಾರಂಭವಾಗುತ್ತಿತ್ತು. ಅದರಲ್ಲೇ ತಲ್ಲೀನರಾಗುತ್ತಿದ್ದ ನಾವು ಮತ್ತೆ ಬಾಹ್ಯ ಪ್ರಪಂಚಕ್ಕೆ ಬರುತ್ತಿದ್ದುದು ಬೆಳಕು ಹರಿದು, ಆಟಕ್ಕೆ ಮಂಗಳ ಹಾಡಿದ ಮೇಲೆಯೇ.
ಆಟ ಮುಗಿದು ಮನೆಗೆ ಬಂದಮೇಲೂ ದಿನವಿಡೀ ನಾವು ಆಟದ ಪ್ರಪಂಚದ ಗುಂಗಿನಲ್ಲೇ ಇರುತ್ತಿದ್ದೆವು. ಆ ದಿನದ ಹಗಲು ಗಂಟಿ ಮೇಯಿಸುವಾಗ ನಮ್ಮ ಆಟವೂ ಯಕ್ಷಗಾನವೇ. ಚಿಮಿಣಿ ಎಣ್ಣೆ ಡಬ್ಬಿ ನಮಗೆ ಚಂಡೆ. ತೆಮೆಕೋಲು ನೆಟ್ಟು ರಂಗಸ್ಥಳ ನಿರ್ಮಾಣ. ಮರಸಣ ಎಲೆ, ಹನೆ ಹೆಡೆಗಳು ನಮಗೆ ಕೇದಿಗೆ ಮುಂದಲೆ, ಮುಂಡಾಸುಗಳು. ಹಿಂದಿನ ರಾತ್ರಿಯ ಆಟಕ್ಕಿಂತಲೂ ನಮ್ಮ ಆಟ ಜೋರು!

Related Articles

Back to top button
error: Content is protected !!