ಹಿರಿಯ ಪತ್ರಕರ್ತ, ಧಾರ್ಮಿಕ ಮುಂದಾಳು ಬಿ.ಎನ್ ಹರೀಶ್ ಬೋಳೂರು ನಿಧನ

Views: 313
ಮಂಗಳೂರು: ಹಿರಿಯ ಪತ್ರಕರ್ತ,ಬೋಳೂರು ಶ್ರೀ ಮಹಾಮಾಯಿ ದೇವಸ್ಥಾನದ ಪಾರಂಪರಿಕ ಅರ್ಚಕ ಶ್ರೀ ಬಿ.ಎನ್ ಹರೀಶ್ ಬೋಳೂರು (81)ಜೂನ್.17 ರಂದು ನಿಧನರಾದರು.ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅವರು ಆರಂಭಿಕವಾಗಿ ನೇಕಾರಿಕೆ ಕುಲಕಸುಬನ್ನು ಆರಂಭಿಸಿ 1961ರಲ್ಲಿ ‘ನವ ಭಾರತ’ ದಿನಪತ್ರಿಕೆಯ ಮೂಲಕ ಪತ್ರಿಕಾ ರಂಗಕ್ಕೆ ಪ್ರವೇಶಿಸಿದರು. 1970ರಲ್ಲಿ ಆರಂಭವಾದ ಉದಯವಾಣಿ ದಿನಪತ್ರಿಕೆ ವಿಭಾಗದಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿದ್ದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಪಡೆದು ಇವರು ಸಾಹಿತ್ಯ ಕ್ಷೇತ್ರದಲ್ಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಅಖಿಲ ಭಾರತ ತುಳು ಒಕ್ಕೂಟದಲ್ಲಿ ಪದಾಧಿಕಾರಿಯಾಗಿ ಉಡುಪಿ ತುಳುಕೂಟದ ಸ್ಥಾಪನೆಯ ರೂವಾರಿಯಾಗಿ ಹಲವಾರು ಸ್ಮರಣ ಸಂಚಿಕೆಯ ಜವಾಬ್ದಾರಿಯನ್ನು ಹೊತ್ತು ಪ್ರಕಟಿಸಿದ್ದಾರೆ.
‘ಮಗ್ಗದ ಮದಣ’ ಎಂಬ ಕಿರು ಕಥೆಗಳನ್ನು ಒಳಗೊಂಡ ಕೃತಿಯನ್ನು ಪ್ರಕಟಿಸಿದ್ದಾರೆ. ಯುವ ಬರಹಗಾರರನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸುಮಾರು 50ಕ್ಕೂ ಹೆಚ್ಚು ಬರಹಗಾರರಿಂದ ಸಂಕಲನಗೊಂಡಿರುವ ಕವನಗಳು ‘ನಾ ಹಾಡಲೇನು? ಇತ್ತೀಚೆಗೆ ಪ್ರಕಟಿಸಿದ್ದಾರೆ.
ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಹಿರಿಯ ಸದಸ್ಯರಾಗಿ ಧಾರ್ಮಿಕ ವೇದಿಕೆಯ ಸಂಚಾಲಕರಾಗಿ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ,ಮಂಗಳೂರು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಶ್ರೀ ಮಹಮ್ಮಾಯಿ ದೇವಿಯ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ.’ಕನ್ನಡ ಕರಾವಳಿ’ ಸುದ್ಧಿ ಜಾಲತಾಣ ಪತ್ರಿಕೆಯ ಗೌರವ ಸಲಹೆಗಾರರಾಗಿದ್ದರು.
ಮೃತರ ಅಂತ್ಯಕ್ರಿಯೆಯನ್ನು ಮಂಗಳೂರು ಬೋಳೂರಿನ ರುದ್ರಭೂಮಿಯಲ್ಲಿ ಜೂ.18. ರಂದು ಅಪರಾಹ್ನ 2.30 ಗಂಟೆಗೆ ಸರಿಯಾಗಿ ಜರುಗಲಿದೆ. ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.






