ಕುಂದಾಪುರದಲ್ಲಿ ಭಾರಿ ಮಳೆ -ಜನಜೀವನ ಅಸ್ತವ್ಯಸ್ತ

Views: 113
ಉಡುಪಿ:ಕುಂದಾಪುರ, ಬೈಂದೂರು ತಾಲೂಕಿನಾದ್ಯಂತ ಶನಿವಾರ ಗಾಳಿ ಮಳೆ ಸಹಿತ ಉತ್ತಮ ಮಳೆಯಾಗಿದೆ.ಕೆಲವೊಂದು ಕಡೆ ಮರ ಬಿದ್ದು ವಾಹನ ಜಖಂಗೊಂಡರೆ ಇನ್ನು ಕೆಲವಡೆ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಹಾನಿಯಾಗಿದೆ.ಬೈಂದೂರು ಕುಂದಾಪುರ ತಾಲೂಕಿನಲ್ಲಿ ಬಾರಿ ನಷ್ಟ ಸಂಭವಿಸಿದೆ. ಸತತ ಸುರಿದ ಮಳೆಗೆ ಜನಸಂಚಾರ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಮಳೆ ನೀರು ಹೋಗಲು ಬಹುತೇಕ ಕಡೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳೆಲ್ಲಾ ತೋಡಿನಂತಾಗಿದೆ. ವಾಹನ ಸವಾರರು ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ.
ಬೈಂದೂರು ಯಡ್ತರೆ ಎಂಬಲ್ಲಿ ಭಾರಿ ಮಳೆಯಿಂದಾಗಿ ಇಲ್ಲಿನ ಶಾಲೆಯ ತರಗತಿ ಕೋಣೆಗೆ ನೀರು ನುಗ್ಗಿದ್ದು, ವಿದ್ಯಾರ್ಥಿಗಳಿಗೆ ರಜೆ ನೀಡಲಾಯಿತು.
ಕುಂದಾಪುರ ಮುಖ್ಯ ರಸ್ತೆಯಲ್ಲಿ ಮರವೊಂದು ಬುಡ ಸಹಿತ ಧರಾಶಾಹಿಯಾಗಿ ರಿಕ್ಷಾಕ್ಕೆ ಹಾನಿಯಾಗಿದೆ.
ನಿರಂತರ ಮಳೆಯಿಂದಾಗಿ ಹೊಸಾಡು ಗ್ರಾಮದ ಎರಡು ಮನೆಗಳು ಕುಸಿತದ ಭೀತಿಯಲ್ಲಿದೆ. ಅನಾಹುತ ಸಂಭವಿಸುವ ಮುನ್ನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ತಿಳಿಯರು ಸಂಬಂಧಪಟ್ಟ ಅಧಿಕಾರಿಗಳನ್ನು ಅಗ್ರಹಿಸಿದ್ದಾರೆ.
ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡಾಡಿ ಮತ್ಯಾಡಿ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ಚಲಿಸುತ್ತಿದ್ದ ಅಟೋ ರಿಕ್ಷಾದ ಮೇಲೆ ಮರ ಉರುಳಿ ರಿಕ್ಷಾ ಜಖಂಗೊಂಡಿದೆ.ಚಾಲಕ ಶಂಕರ ಪೂಜಾರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಸ್ವಲ್ಪ ಹೊತ್ತು ವಾಹನಸಂಚಾರ ಅಸ್ತವ್ಯಸ್ತಗೊಂಡಿತ್ತು.ಸ್ಥಳೀಯರ ಸಹಕಾರದೊಂದಿಗೆ ಜೆಸಿಬಿ ಮೂಲಕ ಮರವನ್ನು ತೆರವುಗೊಳಿಸಲಾಯಿತು.
ಕೋಟೇಶ್ವರ ರಥಬೀದಿಯಲ್ಲಿನ ಶ್ರೀ ಮಾರಿಯಮ್ಮ ದೇವಾಲಯದ ಸಮೀಪ ಇರುವ ಶ್ರೀ ನಾಗ ದೇವಸ್ಥಾನದ ಹಿಂಬದಿ ಅದಕ್ಕೆ ಹೊಂದಿಕೊಂಡಂತೆ ಇರುವ ಪುರಾತನವಾದ ಬೃಹತ್ ಹುಣಿಸೆ ಮರದ ಕೊಂಬೆಯೊಂದು ಶುಕ್ರವಾರ ಸಂಜೆ ಬೀಸಿದ ಬಲವಾದ ಗಾಳಿಗೆ ಮುರಿದು ಬಿದ್ದಿದೆ.






