ಭದ್ರಕೋಟೆ ಎನಿಸಿದ್ದ ರಾಜ್ಯಗಳಲ್ಲೇ ಬಿಜೆಪಿಗೆ ಶಾಕ್.? ಎಲ್ಲೆಲ್ಲಿ ಹಿನ್ನಡೆ ?

Views: 117
ಲೋಕ ಸಭಾ ಚುನಾವಣಾ ಫಲಿತಾಂಶದಲ್ಲಿ 400 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಎನ್ ಡಿ ಗೆ ಈ ಬಾರಿ 300 ಸೀಟು ಕೂಡಾ ಪಡೆಯಲಾಗಿಲ್ಲ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಏಕಾಂಗಿಯಾಗಿ ಬಹುಮತ ಪಡೆದಿದ್ದ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತವನ್ನೂ ತಲುಪಿಲ್ಲ.
2019ರ ಲೋಕಸಭಾ ಚುನಾವಣೆಯಲ್ಲಿ 353 ಸೀಟುಗಳನ್ನು ಗೆದ್ದಿದ್ದ ಎನ್ಡಿಎ ಈ ಬಾರಿ 300ರ ಗಡಿ ದಾಟಲು ಸಾಧ್ಯವಾಗಿಲ್ಲ. 2014 ಹಾಗೂ 2019ರ ಚುನಾವಣೆಯಲ್ಲಿ ಬಿಜೆಪಿ ಕೈ ಹಿಡಿದಿದ್ದು 2019ರಲ್ಲಿ ಏಕಾಂಗಿಯಾಗಿಯೇ ಬಿಜೆಪಿ 303 ಸ್ಥಾನಗಳನ್ನ ಗೆದ್ದುಕೊಂಡಿತ್ತು. ಆದ್ರೆ ಈ ಬಾರಿ ಹಿಂದಿ ಭಾಷಿಕ ರಾಜ್ಯಗಳಲ್ಲೇ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಹರಿಯಾಣ ಅಲ್ಲದೇ ಪಂಜಾಬಿ ನಲ್ಲೂ ಬಿಜೆಪಿ ನೀರಸ ಫಲಿತಾಂಶ ತೋರಿದೆ.
ಅದರಲ್ಲೂ ಉತ್ತರ ಪ್ರದೇಶವೊಂದರಲ್ಲೇ ಬಿಜೆಪಿ 30 ಸೀಟುಗಳನ್ನು ಕಳೆದುಕೊಂಡಿದೆ. ರಾಮನ ವಿಚಾರದಲ್ಲಿ ನಂಬಿದ್ದ ಬಿಜೆಪಿಗೆ ಅದ್ಯಾಕೋ ಶ್ರೀರಾಮ ಕೃಪೆ ತೋರಿದಂತಿಲ್ಲ,
ನಿರೀಕ್ಷೆಯಲ್ಲಿದ್ದ ರಾಜಸ್ಥಾನದಲ್ಲಿ ಬಿಜೆಪಿಗೆ 11 ಕ್ಷೇತ್ರಗಳು ಲಾಸ್
ಮತ್ತೊಂದೆಡೆ 25 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಬಿಜೆಪಿ ಈ ಬಾರಿ 14 ಕ್ಷೇತ್ರಗಳನ್ನಷ್ಟೇ ಗೆದ್ದಿದೆ. ಕಾಂಗ್ರೆಸ್ 8 ಹಾಗೂ ಇತರರು 3 ಸ್ಥಾನಗಳನ್ನು ಗಳಿಸಿದ್ದಾರೆ. 2019ರಲ್ಲಿ ಎಲ್ಲಾ 25 ಕ್ಷೇತ್ರಗಳನ್ನೂ ಬಿಜೆಪಿ ಗೆದ್ದು ದಾಖಲೆ ಬರೆದಿದ್ದ ಬಿಜೆಪಿ ಇಲ್ಲಿಯೂ 11 ಸ್ಥಾನಗಳಷ್ಟು ನಷ್ಟ ಅನುಭವಿಸಿದೆ.
ಮಹಾರಾಷ್ಟ್ರದಲ್ಲಿ ಮಂಕಾದ ಮೈತ್ರಿ
ಮಹಾರಾಷ್ಟ್ರದಲ್ಲೂ ಎನ್ಡಿಎ ಮೈತ್ರಿಕೂಟ ಕ್ಷೇತ್ರಬಲ ಕುಗ್ಗಿದೆ. ಒಟ್ಟು 48 ಕ್ಷೇತ್ರಗಳಲ್ಲಿ ಮಹಾರಾಷ್ಟ್ರದಲ್ಲಿ 2019ರಲ್ಲಿ 41 ಸ್ಥಾನಗಳನ್ನು ಗೆದ್ದಿದ್ದ ಎನ್ಡಿಎ ಈ ಬಾರಿ 18 ಸ್ಥಾನಗಳನ್ನಷ್ಟೇ ಪಡೆದಿದೆ.
ಕರ್ನಾಟಕದಲ್ಲೂ ನಿರೀಕ್ಷಿತ ಸಾಧನೆ ತೋರದ ಬಿಜೆಪಿ
ಇತ್ತ ಕರ್ನಾಟಕದಲ್ಲಿ ಈ ಬಾರಿ ಜೆಡಿಎಸ್ ಮೈತ್ರಿಯೊಂದಿಗೆ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದ ಬಿಜೆಪಿ ನಿರಾಸೆ ಅನುಭವಿಸಿದೆ. ಕಳೆದ ಬಾರಿಗಿಂತ 7 ಸ್ಥಾನಗಳನ್ನು ಕಳೆದುಕೊಂಡಿದೆ. ಚಿಕ್ಕೋಡಿ, ಕಲಬುರಗಿ, ಬಳ್ಳಾರಿ, ಬೀದರ್ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸೋಲು ಕಂಡಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಭದ್ರನೆಲೆ ಹೊಂದಿದ್ದ ಬಿಜೆಪಿ ಬಲ ಕುಗ್ಗಿದಂತಾಗಿದೆ. ಒಟ್ಟಾರೆ, ಅತಿಯಾದ ಆತ್ಮವಿಶ್ವಾಸವೇ ಬಿಜೆಪಿಗೆ ಹಿನ್ನಡೆ ಆಯ್ತಾ ಎಂಬ ಮಾತು ಕೇಳಿಬರ್ತಿದೆ.






