ರಾಜಕೀಯ

ಲೋಕಸಭಾ ಚುನಾವಣೆ ಫಲಿತಾಂಶ: ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಡೆದ ಮತ ಪ್ರಮಾಣ ಎಷ್ಟು?

Views: 107

ಬೆಂಗಳೂರು: ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಮೈಲುಗೈ ಸಾಧಿಸಿದ್ದು, ಕಾಂಗ್ರೆಸ್ ಒಂದಂಕಿಗೆ ತೃಪ್ತಿ ಪಟ್ಟುಕೊಂಡಿದೆ. ರಾಜ್ಯ ಲೋಕಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳು ಪಡೆದ ಮತ ಪ್ರಮಾಣ ಇಲ್ಲಿದೆ.

ಕರ್ನಾಟಕ ಲೋಕಸಮರದಲ್ಲಿ ಬಿಜೆಪಿ 17 ಸ್ಥಾನ, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಕಳೆದ ಬಾರಿಯ ಲೋಕಸಭೆ ಚುನಾವಣೆಗಿಂತ 8 ಸ್ಥಾನ ಕುಸಿತ ಕಂಡಿದೆ. ಕಳೆದ ಬಾರಿ ಬಿಜೆಪಿ 25 ಸ್ಥಾನ ಪಡೆದಿತ್ತು. ಇತ್ತ 2019ರಲ್ಲಿ 1 ಸ್ಥಾನ ಪಡೆದ ಕಾಂಗ್ರೆಸ್ ಈ ಬಾರಿ 8 ಸ್ಥಾನ ಹೆಚ್ಚಿಗೆ ಪಡೆದುಕೊಂಡಿದೆ. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ದಾಟುವಲ್ಲಿ ವಿಫಲವಾದರೂ, ಕರ್ನಾಟಕದಲ್ಲಿ ತನ್ನ ಮತ ಪ್ರಮಾಣ ಹೆಚ್ಚಿಸಲು ಯಶಸ್ಸು ಕಂಡಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗಣನೀಯ ಪ್ರಮಾಣದಲ್ಲಿ ತನ್ನ ಮತ ಪ್ರಮಾಣ ಹೆಚ್ಚಿಸಿಕೊಂಡಿದೆ. ಈ ಬಾರಿ ಕಾಂಗ್ರೆಸ್ ಲೋಕಸಮರದಲ್ಲಿ ರಾಜ್ಯದಲ್ಲಿ ಶೇ 45.43ರಷ್ಟು ಮತ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 1 ಸ್ಥಾನ ಜಯಿಸಿತ್ತು. ಕಳೆದ ಬಾರಿ ರಾಜ್ಯ ಕೇವಲ ಶೇ 32ರಷ್ಟು ಮತ ಪ್ರಮಾಣ ಗಳಿಸಿತ್ತು.

ಕಾಂಗ್ರೆಸ್  ಗ್ಯಾರಂಟಿ ಬಲದೊಂದಿಗೆ ಎರಡಂಕಿ ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿತ್ತು. ಆದರೆ ಮೈತ್ರಿ ಮುಂದೆ ಗ್ಯಾರಂಟಿ ನಿರೀಕ್ಷಿತ ಫಲ ನೀಡಲು ಸಾಧ್ಯವಾಗಿಲ್ಲ. ಈ ಬಾರಿ 9 ಸ್ಥಾನ ಗೆದ್ದು ಒಂದಂಕಿಗೆ ತೃಪ್ತಿ ಪಡಬೇಕಾಯಿತು‌. ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಿರುಸಿನ ಸ್ಪರ್ಧೆ ನೀಡಿತ್ತು. ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿತ್ತು. ಆ ಮೂಲಕ ತನ್ನ ಮತ ಪ್ರಮಾಣವನ್ನು ಗಣನೀಯವಾಗಿ ಏರಿಕೆ ಮಾಡಿತು.

ಬಿಜೆಪಿ ಈ ಬಾರಿ 17 ಸ್ಥಾನ ಗೆದ್ದಿದೆ. ಕಳೆದ ಬಾರಿ 25 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 17ಕ್ಕೆ ಸ್ಥಾನಕ್ಕೆ ಕುಸಿತ ಕಂಡಿದೆ. ಕಳೆದ ಬಾರಿ ರಾಜ್ಯದಲ್ಲಿ ಲೋಕಸಮರದಲ್ಲಿ ಶೇ 51ರಷ್ಟು ಮತ ಪ್ರಮಾಣ ಗಳಿಸಿದ್ದರು. ಆದರೆ ಈ ಬಾರಿ ಮತ ಪ್ರಮಾಣ ಶೇ 46.04ಕ್ಕೆ ಇಳಿಕೆಯಾಗಿದೆ. ಕಳೆದ ಬಾರಿ ಬಿಜೆಪಿ 25 ಸ್ಥಾನವನ್ನು ಗೆದ್ದಿತ್ತು. ಈ ಬಾರಿ ಕಳೆದ ಬಾರಿಗಿಂತ ಬಿಜೆಪಿ ಮತ ಪ್ರಮಾಣ ಸುಮಾರು ಶೇ 5ರಷ್ಟು ಕಡಿತವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಈ ಬಾರಿ ಕೇವಲ ಶೇ 1ಕ್ಕಿಂತಲೂ ಕಡಿಮೆ ಮತ ಪ್ರಮಾಣದ ವ್ಯತ್ಯಾಸ ಆಗಿದೆ.

ಜೆಡಿಎಸ್ ಮತ ಪ್ರಮಾಣದಲ್ಲೂ ಕುಸಿತ: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಗೆ ಈ ಬಾರಿ ಲೋಕಸಮರ ಸಮಾಧಾನಕರ ಫಲಿತಾಂಶವನ್ನೇ ನೀಡಿದೆ. ಸ್ಪರ್ಧೆ ಮಾಡಿದ ಮೂರು ಕ್ಷೇತ್ರಗಳಲ್ಲಿ 2 ಸ್ಥಾನಗಳನ್ನು ಗೆದ್ದಿದೆ. ಹಾಸನದಲ್ಲಿ ಸೋಲು ಕಂಡಿದೆ. ಕಳೆದ ಬಾರಿ ಹಾಸನ ಕ್ಷೇತ್ರವನ್ನು ಮಾತ್ರ ಗೆದ್ದಿದ್ದ ಜೆಡಿಎಸ್ ಈ ಬಾರಿ ಹಾಸನವನ್ನು ಕಳೆದುಕೊಂಡಿದ್ದು, ಮಂಡ್ಯ ಹಾಗೂ ಕೋಲಾರವನ್ನು ಗಿಟ್ಟಿಸಿಕೊಂಡಿದೆ. ಕಳೆದ ಬಾರಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಜೆಡಿಎಸ್ಗೆ ದುಬಾರಿಯಾಗಿತ್ತು. ಈ ಬಾರಿ ಬಿಜೆಪಿ ಜೊತೆಗಿನ ಮೈತ್ರಿ ಜೆಡಿಎಸ್ ಲಾಭವನ್ನೇ ತಂದಿತು.

ಆದರೆ ಜೆಡಿಎಸ್ ಈ ಬಾರಿ ಶೇ5.60ರಷ್ಟು ಮತ ಪ್ರಮಾಣ ಗಳಿಸಿದೆ. ಕಳೆದ ಬಾರಿ ಸುಮಾರು ಶೇ 10ರಷ್ಟು ಮತ ಪ್ರಮಾಣ ಗಳಿಸಿತ್ತು. ಕಳೆದ ಬಾರಿಗಿಂತ ಈ ಬಾರಿ ಮತ ಪ್ರಮಾಣದಲ್ಲಿ ಕುಸಿತ ಕಂಡಿದ್ದರೂ, ಹೆಚ್ಚಿನ ಗೆಲುವನ್ನು ಪಡೆದುಕೊಂಡಿದೆ.

Related Articles

Back to top button
error: Content is protected !!