ಇತರೆಶಿಕ್ಷಣ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ವಿದ್ಯಾರ್ಥಿ ಆತ್ಮಹತ್ಯೆ

Views: 55

ಕನ್ನಡ ಕರಾವಳಿ ಸುದ್ದಿ: ಕನ್ನಡ ವಿಷಯದಲ್ಲಿ ಅನುತ್ತೀರ್ಣನಾದ ಕಾರಣಕ್ಕೆ ಮನನೊಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಚಿತ್ರದುರ್ಗ ನಗರದ ಹೊರಪೇಟೆಯ ಅಂಜುಮನ್ ಸರ್ಕಲ್ ನಿವಾಸಿ ಮನ್ಸೂರ್ ಬೇಗ್ ಅವರ ಪುತ್ರ ಅಯಾನ್ ಬೇಗ್ (16) ಮೃತ ದುರ್ದೈವಿ. ಈತ ನಗರದ ಡಾನ್‌ಬಾಸ್ಕೋ ಶಾಲೆಯಲ್ಲಿ ಓದುತ್ತಿದ್ದನು. ಗುರುವಾರ ಪ್ರಕಟವಾದ ಎಸ್‌ಎಸ್ಎಲ್‌ಸಿ ಫಲಿತಾಂಶದಲ್ಲಿ ಅಯಾನ್ ಕನ್ನಡ ವಿಷಯದಲ್ಲಿ ಫೇಲ್ ಆಗಿದ್ದನು. ಉತ್ತಮ ಅಂಕ ನಿರೀಕ್ಷಿಸಿದ್ದ ವಿದ್ಯಾರ್ಥಿ, ಫಲಿತಾಂಶ ಕಂಡು ತೀವ್ರವಾಗಿ ಕುಗ್ಗಿ ಹೋಗಿದ್ದ ಎನ್ನಲಾಗಿದೆ.

ಅಯಾನ್ ತಂದೆ ಮನ್ಸೂರ್ ಬೇಗ್ ಅವರು ಬೆಳಿಗ್ಗೆಯೇ ಕೆಲಸಕ್ಕೆ ತೆರಳಿದ್ದರು, ತಾಯಿ ಕೂಡ ಕಂಪ್ಯೂಟರ್ ಸೆಂಟರ್ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಯಾನ್ ಈ ತೀವ್ರ ನಿರ್ಧಾರ ಕೈಗೊಂಡಿದ್ದಾನೆ. ಮಧ್ಯಾಹ್ನದ ವೇಳೆಗೆ ಪೋಷಕರು ಫೋನ್ ಮಾಡಿ ಫಲಿತಾಂಶದ ಬಗ್ಗೆ ವಿಚಾರಿಸಿದಾಗ, “ನೋಡಿ ಹೇಳುತ್ತೇನೆ” ಎಂದು ಉತ್ತರಿಸಿದ್ದ ಅಯಾನ್, ಆನಂತರ ಫೋನ್ ಕರೆ ಸ್ವೀಕರಿಸಿರಲಿಲ್ಲ.

ಆತಂಕಗೊಂಡ ತಂದೆ ಮನೆಗೆ ಬಂದು ನೋಡಿದಾಗ ಅಯಾನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Related Articles

Back to top button
error: Content is protected !!