ಕಾರ್ಕಳ: ಬೈಲೂರು ಪರಶುರಾಮ್ ಥೀಮ್ ಪಾರ್ಕ್ ತಾಮ್ರದ ಹೊದಿಕೆ ಕಳವು, ಇಬ್ಬರು ಆರೋಪಿಗಳ ಬಂಧನ
Views: 81
ಕನ್ನಡ ಕರಾವಳಿ ಸುದ್ದಿ: ಕಾರ್ಕಳ ಬೈಲೂರು ಪರಶುರಾಮ್ ಥೀಮ್ ಪಾರ್ಕ್ ನ ಕಟ್ಟಡದ ಮೇಲ್ಟಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರು ಕಳವಾರು ಚರ್ಚ್ ಗುಡ್ಡೆಯ ಆರೀಫ್ ಯಾನೆ ಮುನ್ನ(37) ಹಾಗೂ ಮಂಗಳೂರು ಕಾವೂರಿನ ಅಬ್ದುಲ್ ಹಮೀದ್ (32) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಇವರು ಜ.3ರಂದು ಪಾರ್ಕ್ ಕಟ್ಟಡದ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿ ಕಟ್ಟಡದ ಮೇಲ್ಬಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಗಂಭೀರತೆ ಹಾಗೂ ಸೂಕ್ಷ್ಮತೆಯನ್ನು ಅರಿತ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದು ವಿಶೇಷ ಪೊಲೀಸ್ ತಂಡವು ಉಡುಪಿ, ದ.ಕ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ ಹುಡುಕಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕಳವು ಮಾಡಿದ 45,000 ರೂ. ಮೌಲ್ಯದ 51 ಕೆಜಿ ತಾಮ್ರದ ಹೊದಿಕೆ ಹಾಗೂ 1200ರೂ. ಮೌಲ್ಯದ 2 ಸಿಲಿಂಗ್ ಫ್ಯಾನ್, ಕೃತ್ಯಕ್ಕೆ ಬಳಸಿದ 1 ಲಕ್ಷ ರೂ. ಮೌಲ್ಯದ ಗೂಡ್ಸ್ ಅಟೋರಿಕ್ಷಾ, 70,000ರೂ. ಮೌಲ್ಯದ ಬೈಕ್ ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ತಲೆಮರೆಸಿಕೊಂಡ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.






