ರಾಜಕೀಯ

ಬಿಜೆಪಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವವರಿಗೆ ಅವಕಾಶವಿಲ್ಲ: ರಘುಪತಿ ಭಟ್

Views: 32

ಮಂಗಳೂರು: ಹಿಂದೆ ಪಕ್ಷದಲ್ಲಿ ಅವಕಾಶ ವಂಚಿತರನ್ನು, ಹಿರಿಯರನ್ನು ಗುರುತಿಸಿ ವಿಧಾನಪರಿಷತ್ ಟಿಕೆಟ್‌ ನೀಡಲಾಗುತ್ತಿತ್ತು. ಆದರೆ, ಈಗ ಸಕ್ರಿಯವಾಗಿ ಕೆಲಸ ಮಾಡುವವರಿಗೆ ಅವಕಾಶವಿಲ್ಲ ಎಂದು ವಿಧಾನಪರಿಷತ್ ಚುನಾವಣೆಯ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿಯಲ್ಲಿ ಇಂದು ಅಪ್ಪನಿಗೆ ಸಿಎಂ ಪಟ್ಟ, ಮಗನಿಗೆ ರಾಜ್ಯ ಘಟಕದ ಅಧ್ಯಕ್ಷತೆ, ಇನ್ನೊಬ್ಬ ಮಗನಿಗೆ ಸಂಸದ ಸ್ಥಾನ ಬೇಕು. ಆದರೆ, ಸಕ್ರಿಯವಾಗಿ ಕೆಲಸ ಮಾಡುವವರಿಗೆ ಅವಕಾಶವಿಲ್ಲ. ನಾನು ಉಡುಪಿ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ, ಒಂದು ಬಾರಿ ನಗರಸಭೆ ಸದಸ್ಯನಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಎಂದೂ ಸೋಲು ಕಾಣದ ನಾನು ಸಕ್ರಿಯ ರಾಜಕಾರಣದಲ್ಲಿ ಇರಬೇಕೆಂದು ಬಯಸಿದವ. ಕರಾವಳಿ ಭಾಗದ, ಅಡಿಕೆ ಬೆಳೆಗಾರರ ಸಮಸ್ಯೆಗಳ ಅರಿವು ನನಗಿದೆ. ದೇಶದಲ್ಲಿ ಯಾವುದೇ ಶಾಸಕ ಮಾಡದಷ್ಟು ಕೆಲಸವನ್ನು ನಾನು ಮಾಡಿದ್ದೇನೆ. ಕ್ರಿಯಾಶೀಲವಾಗಿ ಕೆಲಸ ಮಾಡುವ ಹುಮ್ಮಸ್ಸು ಇರುವುದರಿಂದಾಗಿಯೇ ವಿಧಾನ ಪರಿಷತ್‌ನಲ್ಲಿ ಸ್ಪರ್ಧಿಸಿದ್ದೇನೆ’ ಎಂದರು.

ಬಿಜೆಪಿ ಹಿಂದುತ್ವದ ಪಕ್ಷವಾದರೂ ಇಲ್ಲಿ ಹಿಂದುತ್ವದ ನಾಯಕರನ್ನೇ ಕಡೆಗಣಿಸಲಾಗುತ್ತಿದೆ. ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ನನಗೂ ಗೊತ್ತಿಲ್ಲ ಎಂದರು.ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಡಾ.ಧನಂಜಯ ಸರ್ಜಿ ಅವರಿಗೆ ಟಿಕೆಟ್ ನೀಡಿದೆ. ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದ ಸಂದರ್ಭ ಅವರು ಸಂಘ ಪರಿವಾರ ಮತ್ತು ಬಿಜೆಪಿಯ ವಿರುದ್ಧವಾಗಿ ಪ್ರಗತಿಪರರೊಂದಿಗೆ ಸೇರಿಕೊಂಡು ಜಾಥಾ ನಡೆಸಿದ್ದರು. ಕಾಂಗ್ರೆಸ್ ಟಿಕೆಟ್‌ಗೆ ಯತ್ನಿಸಿದ ಅವರು ಒಂದು ವರ್ಷದಿಂದೀಚೆಗೆ ಬಿಜೆಪಿ ಜತೆ ಗುರುತಿಸಿಕೊಂಡವರು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಕೊಡುತ್ತಿದ್ದರೆ ನನಗೆ ಬೇಸರ ಇರುತ್ತಿರಲಿಲ್ಲ. ಪದವೀಧರ ಕ್ಷೇತ್ರದ ಟಿಕೆಟ್ ಸಹಜವಾಗಿ ಕರಾವಳಿಗೆ ಸಿಗಬೇಕಿತ್ತು. ಅದಕ್ಕಾಗಿ ನನಗೆ ಕೊಡಿ ಎಂದು ಕೇಳಿದ್ದೆ ಎಂದರು.

ರಾಜಾರಾಂ ಭಟ್, ನವೀನ್ ಕುಲಾಲ್, ಮಂಗಳೂರು ಮಹಾ ನಗರಪಾಲಿಕೆ ಮಾಜಿ ಸದಸ್ಯ ನವೀನಚಂದ್ರ ಕೆ, ಸಂತೋಷ್ ರಾವ್, ಸುವರ್ಧನ್ ನಾಯಕ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

Related Articles

Back to top button
error: Content is protected !!