2 ಕೋಟಿ ವಿಮಾ ಹಣಕ್ಕೆ ಮಾಜಿ ಸೈನಿಕನ ಕೊಲೆ ಪ್ರಕರಣ: ಪತ್ನಿ, ಪ್ರಿಯಕರ ಸೇರಿ 9 ಆರೋಪಿಗಳ ಬಂಧನ
Views: 13
ಕನ್ನಡ ಕರಾವಳಿ ಸುದ್ದಿ: 2 ಕೋಟಿ ರೂಪಾಯಿ ವಿಮಾ ಹಣಕ್ಕಾಗಿ ಪತಿಯನ್ನು ಪತ್ನಿಯೇ ಹತ್ಯೆ ಮಾಡಿದ ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣವನ್ನು ಜಿಲ್ಲೆಯ ಯಮಕನಮರಡಿ ಠಾಣೆ ಪೊಲೀಸರು ಬೇಧಿಸಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿ ಸೇರಿದಂತೆ ಒಟ್ಟು 9 ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ಹುಕ್ಕೇರಿ ತಾಲೂಕಿನ ಘೊಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಕಲಗೌಡ ಮಂಜರಗಿ (46) ಕೊಲೆಯಾದವರು. ಅವರ ಹೆಸರಿನಲ್ಲಿ ಹೆಚ್‌ಡಿಎಫ್‌ಸಿ ಮತ್ತು ಎಸ್‌ಬಿಐ ಬ್ಯಾಂಕ್‌ಗಳಲ್ಲಿ ವಿಮೆ ಮಾಡಿಸಲಾಗಿತ್ತು. ರಸ್ತೆ ಅಪಘಾತದಲ್ಲಿ ಮರಣ ಹೊಂದಿದರೆ ಸುಮಾರು 2 ಕೋಟಿ ರೂ. ವಿಮಾ ಹಣ ಬರುತ್ತದೆ ಎಂಬ ದುರಾಸೆಯಿಂದ, ಸಂದೀಪ್ ಅವರ ಪತ್ನಿ ಆರೋಪಿ ಸುಮಾ ಮಂಜರಗಿ ಸೇರಿದಂತೆ 9 ಜನ ಆರೋಪಿಗಳ ಸಹಕಾರದೊಂದಿಗೆ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಕೊಲೆಯಾದ ಸಂದೀಪ್ ಅವರ ಪತ್ನಿ ಸುಮಾ ಮಂಜರಗಿ, ಆಕೆಯ ಪ್ರಿಯಕರ ಪುಂಡಲೀಕ ಡೊಂಬರ್, ಆರ್‌ಎಂಪಿ ಡಾಕ್ಟರ್ ಬಸವರಾಜ್ ಭಸ್ಮೆ, ಬೆಳಗಾವಿ ಕಮಿಷನರ್ ಕಚೇರಿ ಎಫ್‌ಡಿಎ ಅಶೋಕ ಗುಜನಾಳ, ಎಫ್‌ಎಲ್‌ಎಲ್ ಪ್ರಯೋಗಾಲಯದ ಗುಮಾಸ್ತ ಅಪ್ಪಾಸಾಹೇಬ ನಾಯಿಕ, ಲ್ಯಾಬ್ ಅಸಿಸ್ಟೆಂಟ್ ಚನ್ನಯ್ಯ ಅಡವಿಸ್ವಾಮಿಮಠ, ಸೀನಿಯರ್ ಸೈಂಟಿಫಿಕ್ ಆಫೀಸರ್ ಪಿಎನ್ ನಾಗರಾಜ್, ಪುಂಡಲೀಕ ಸ್ನೇಹಿತರಾದ ಸಚಿನ್ ಸೇಲಾರ, ರಾಹುಲ್ ಜೋಗಿ ಸೇರಿದಂತೆ 9 ಆರೋಪಿಗಳನ್ನು ಬಂಧಿಸಲಾಗಿದೆ.

ಸಂದೀಪ್ ಮಂಜರಗಿ ಅವರು ಮಾರ್ಚ್ 13ರಂದು ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದರು. ಹುಕ್ಕೇರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿದ ಬಳಿಕ ಘಟಪ್ರಭಾದ ಜೆ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದಾಗ ಪತ್ನಿ ಸುಮಾ ಮತ್ತು ಆರೋಪಿ ಪುಂಡಲೀಕ ಡೊಂಬರ ಸೇರಿಕೊಂಡು, ಸಲಾಯಿನ್ ಬಾಟಲ್‌ನಲ್ಲಿ ವಿಷ ಬೆರೆಸಿ ಹಾಗೂ ನಿದ್ದೆ ಮಾತ್ರೆಗಳನ್ನು ಸೇವಿಸಲು ನೀಡಿ ಸಂದೀಪ್ ಅವರನ್ನು ಮಾರ್ಚ್ 15ರಂದು ಹತ್ಯೆ ಮಾಡಿದ್ದರು.






