ಸಿಇಟಿ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಮೂವರ ಅಮಾನತು
Views: 30
ಕನ್ನಡ ಕರಾವಳಿ ಸುದ್ದಿ: ಕೋರಮಂಗಲದ ಕೃಪಾನಿಧಿ ಪದವಿಪೂರ್ವ ಕಾಲೇಜಿನ ಸಿಇಟಿ ಕೇಂದ್ರಕ್ಕೆ ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರ ತೆಗೆಸಿದ ಆರೋಪಿಸಲಾದ ಪ್ರಕರಣ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಉಪ ಪ್ರಾಂಶುಪಾಲ ಸೇರಿ ಮೂವರನ್ನು ಅಮಾನತು ಮಾಡಿ ಕಾಲೇಜಿನ ಆಡಳಿತ ಮಂಡಳಿ ಆದೇಶಿಸಿದೆ.
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲು ಏ.23 ಮತ್ತು 24ರಂದು ಸಿಇಟಿ ನಡೆದಿದೆ. ರಾಜ್ಯದಲ್ಲಿನ 745 ಕೇಂದ್ರಗಳಲ್ಲೂ ಪರೀಕ್ಷೆ ಸುಸೂತ್ರವಾಗಿ ನಡೆದಿವೆ. ಆದರೆ, ಮೊದಲ ದಿನ ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ಪರೀಕ್ಷೆ ಬರೆಯಲು ಕೃಪಾನಿಧಿ ಕಾಲೇಜಿಗೆ ಬಂದಿದ್ದವರ ಪೈಕಿ ಕೆಲವರನ್ನು ಪ್ರವೇಶದ್ವಾರದಲ್ಲಿ ತಪಾಸಣೆ ನಡೆಸಿದ ಸಿಬ್ಬಂದಿ ಜನಿವಾರವನ್ನು ತೆಗೆಸಿದ್ದಾರೆ ಎಂದು ಕೆಲ ವಿದ್ಯಾರ್ಥಿಗಳು ಆರೋಪಿಸಿದ್ದರು.
ಘಟನೆಯನ್ನು ಆರಂಭದಲ್ಲಿ ನಿರಾಕರಿಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಂತರ ಈ ಕುರಿತು ತನಿಖೆ ನಡೆಸಿ, ವರದಿ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ‘ಜನಿವಾರ ತೆಗೆಸಿದ ಪ್ರಕರಣ ಒಂದು ಸೂಕ್ಷ್ಮ ವಿಚಾರವಾಗಿದೆ. ಇಂತಹ ಯಾವುದೇ ಧಾರ್ಮಿಕ ದಿರಿಸುಗಳನ್ನು ತೆಗೆಸದಂತೆ ಪರೀಕ್ಷಾ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ತರಬೇತಿಯಲ್ಲೇ ಸ್ಪಷ್ಟವಾಗಿ ಹೇಳಲಾಗಿತ್ತು. ಸ್ಪಷ್ಟವಾದ ವಸ್ತ್ರಸಂಹಿತೆಯನ್ನೂ ಬಿಡುಗಡೆ ಮಾಡಿದೆ. ಆದರೂ ಇಂತಹ ಘಟನೆಗಳು ನಡೆದಿದೆ ಎಂದರೆ ಉದ್ದೇಶಪೂರ್ವಕ ಎನ್ನುವ ಅನುಮಾನ ಬರುತ್ತದೆ. ಹಾಗಾಗಿ, ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿ, ವರದಿ ನೀಡಬೇಕು’ ಎಂದು ಪತ್ರದಲ್ಲಿ ಕೋರಿದೆ.
ಘಟನೆ ನಡೆದಿರುವುದನ್ನು ಕೃಪಾನಿಧಿ ಕಾಲೇಜು ಆಡಳಿತ ಮಂಡಳಿ ನಿರಾಕರಿಸಿದೆ. ಆದರೆ, ಈ ಕುರಿತು ವಿಚಾರಣೆ ನಡೆಸಲು ಸೂಚಿಸಿದೆ.
‘ಘಟನೆಯ ಸತ್ಯಾಸತ್ಯತೆ ತಿಳಿದುಕೊಳ್ಳಲು ವಿಚಾರಣೆ ಆರಂಭಿಸಿದ್ದೇವೆ. ವಿಚಾರಣೆ ಮುಗಿಯುವವರೆಗೂ ಅಂದು ಪರೀಕ್ಷಾ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸಿದ್ದ ಡಿ.ಸುಧಾಕರ್, ಆರ್.ಸರಿತಾ ಹಾಗೂ ಗಿರಿಜಮ್ಮ ಅವರನ್ನು ಅಮಾನತು ಮಾಡಲಾಗಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೂ ಕೆಲಸಕ್ಕೆ ಹಾಜರಾಗದಂತೆ ಸೂಚಿಸಲಾಗಿದೆ. ವಿಚಾರಣಾ ವರದಿ ಕೈಸೇರಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದೆ.






