ಸಾಸ್ತಾನದಲ್ಲಿ ಸಿದ್ದಾಪುರದ ತೇಜಸ್ ಅಪಹರಣ ಪ್ರಕರಣ:7 ಮಂದಿ ಬಂಧನ; ಇಬ್ಬರು ಪರಾರಿ
Views: 335
ಕನ್ನಡ ಕರಾವಳಿ ಸುದ್ದಿ: ಸಾಸ್ತಾನದಲ್ಲಿನ ಕೋಸ್ಟಲ್ ಪ್ಯಾರಡೈಸ್ ಹೊಟೇಲ್ ಎದುರು ನಡೆದ ಯುವಕನ ಅಪಹರಣ ಹಾಗೂ ಕೋಟ್ಯಾಂತರ ರೂಪಾಯಿ ಹಣಕ್ಕಾಗಿ ಬೇಡಿಕೆ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು ಕ್ರಮ ಕೈಗೊಂಡಿದ್ದು, ಪ್ರಕರಣವನ್ನು ಕೋಕಾ ಕಾಯ್ದೆಯಡಿ ದಾಖಲಿಸಿ ಈಗಾಗಲೇ 7 ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ತಲೆಮರೆಸಿಕೊಂಡ ಆರೋಪಿಗಳಾದ ಮನೋಜ್ ಕೋಡಿಕೆರೆ, ಚೇತನ್ ಪಡೀಲ್ ಕುರಿತು ಮಾಹಿತಿ ನೀಡಿದವರಿಗೆ 50 ಸಾವಿರ ರೂಪಾಯಿ ನಗದು ಬಹುಮಾನವನ್ನು ಉಡುಪಿ ಜಿಲ್ಲಾ ಪೊಲೀಸರು ಘೋಷಿಸಿದ್ದಾರೆ.ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.

ಸಿದ್ದಾಪುರ ಗ್ರಾಮದ ಮೋಹನ ದಾಸ್ ಶೆಟ್ಟಿ ಅವರ ಪುತ್ರ ತೇಜಸ್ ಅವರನ್ನು ಅಪರಿಚಿತರು ಅಪಹರಿಸಿರುವ ಕುರಿತು ಪ್ರಕರಣ ದಾಖಲಾಗಿದೆ. ತೇಜಸ್ನ ಸ್ನೇಹಿತ ಪ್ರಜ್ವಲ್ ನೀಡಿದ ಮಾಹಿತಿಯಂತೆ, ನ.19, 2025ರಂದು ಮಧ್ಯಾಹ್ನ ತೇಜಸ್ನನ್ನು ಸಾಸ್ತಾನದಲ್ಲಿರುವ ಕೋಸ್ಟಲ್ ಪ್ಯಾರಡೈಸ್ ಹೊಟೇಲ್ ಎದುರು ಕೆಲವರು ಕಿಡ್ನಾಪ್ ಮಾಡಿಕೊಂಡು ಹೋಗಿದ್ದರು.
ಈ ವೇಳೆ ತೇಜಸ್ನ ವಾಟ್ಸ್ಆಪ್ ನಂಬರಿನಿಂದ ಪ್ರಜ್ವಲ್ಗೆ ಕರೆ ಬಂದಿದ್ದು, ಅಪಹರಣದ ಬಗ್ಗೆ ಮಾಹಿತಿ ನೀಡಲಾಗಿದೆ. ಬಳಿಕ ಅಪರಿಚಿತರು 50 ಲಕ್ಷ ರೂ. ಹಾಗೂ ನಂತರ 3 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿ, ಹಣ ನೀಡದಿದ್ದರೆ ತೇಜಸ್ನನ್ನು ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಆರೋಪಿಗಳು ಸಂಘಟಿತವಾಗಿ ಅಪರಾಧ ನಡೆಸಿರುವುದು ಪತ್ತೆಯಾದ ಹಿನ್ನೆಲೆ ಪ್ರಕರಣಕ್ಕೆ KCOCA-2000 ಕಾಯ್ದೆ ಅನ್ವಯಿಸಲಾಗಿದೆ. ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ನೇತೃತ್ವದಲ್ಲಿ ತನಿಖೆ ನಡೆಸಿ, ದೇವಿ ಪ್ರಸಾದ್ ಶೆಟ್ಟಿ ದೀಕ್ಷಿತ್ (33), ಸುಜಿತ್ (27), ಸುದೀಪ್ (22), ಶ್ರೀಷಾ ಆನಂದ ಶೆಟ್ಟಿ (35), ಮಿಥುನ್ @ ಕೈಕಂಬ (20), ಸುಹಾಸ್ (31) ಹಾಗೂ ಮನೋಜ್ ವಿ. ಕೊಟ್ಯಾನ್ (34) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ ಕೋಡಿಕೆರೆ (42) ಮತ್ತು ಚೇತನ್ ಪಡೀಲ್ @ ಚೇತನ್ ಕುಲಾಲ್ (38) ಪರಾರಿಯಾಗಿದ್ದಾರೆ. ಮನೋಜ ವಿರುದ್ಧ ಮಂಗಳೂರು ನಗರದಲ್ಲಿ 18 ಮತ್ತು ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದು, ಚೇತನ್ ವಿರುದ್ಧ ಮಂಗಳೂರು ನಗರದಲ್ಲಿ 11 ಹಾಗೂ ಉಡುಪಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.






