ಸರ್ಕಸ್ ತಂಡದೊಂದಿಗೆ ಓಡಿ ಹೋಗಿದ್ದ ಮಗ 26 ವರ್ಷಗಳ ಬಳಿಕ ತಾಯಿಯ ಮಡಿಲಿಗೆ..!
Views: 75
ಕನ್ನಡ ಕರಾವಳಿ ಸುದ್ದಿ: 26 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ, ಇದೀಗ ಮನೆಗೆ ಮರಳಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ಧರ್ಮಸ್ಥಳದ ಅಶೋಕನಗರದ ನಿವಾಸಿಯಾಗಿದ್ದ ಸತೀಶ್ ಎಂಬುವವರೇ ಈಗ ಸಲೀಂ ಆಗಿ ಮರಳಿ ಮನೆಗೆ ಸೇರಿರುವ ವ್ಯಕ್ತಿ.
2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಓಡಿಹೋಗಿದ್ದ ಇವರು, ಇಷ್ಟು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಕಳೆದ 26 ವರ್ಷಗಳಿಂದ ಮಹಾರಾಷ್ಟ್ರದಲ್ಲೇ ನೆಲೆ ನಿಂತು ಕೆಲಸ ಮಾಡಿಕೊಂಡಿದ್ದರು.
ಈ ವೇಳೆ ತನ್ನ ಸ್ವಂತ ಊರು, ಭಾಷೆ ಹಾಗೂ ಹೆತ್ತವರನ್ನೇ ಸಂಪೂರ್ಣವಾಗಿ ಮರೆತುಹೋಗಿದ್ದರು. ಅಲ್ಲಿಯೇ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ‘ಸಲೀಂ ಅಬ್ದುಲ್ ಅನ್ಸಾರಿ’ ಎಂದು ಬದಲಾಯಿಸಿಕೊಂಡಿದ್ದರು. ಅಲ್ಲದೆ, ತಾಲೀಮಾ ಎಂಬಾಕೆಯನ್ನು ವಿವಾಹವಾಗಿರುವ ಇವರಿಗೆ ಈಗ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ.
ಜೂನ್ 9 ರಂದು ಸತೀಶ್ ಅಲಿಯಾಸ್ ಸಲೀಂ ತನ್ನ ಮಹಾರಾಷ್ಟ್ರದ ಸ್ನೇಹಿತರ ತಂಡದೊಂದಿಗೆ ಪ್ರವಾಸಕ್ಕಾಗಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಈ ಹಿಂದೆ ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಬಂದಾಗ ಅವರಿಗೆ ಹಳೆಯ ನೆನಪುಗಳು ಮರುಕಳಿಸಿವೆ.
‘ಇದೇ ನನ್ನ ಸ್ವಂತ ಊರು’ ಎಂಬ ಸತ್ಯ ಮನವರಿಕೆಯಾಗಿದೆ. ತಮ್ಮಂದಿರ ಹೆಸರುಗಳು ನೆನಪಿದ್ದ ಕಾರಣ, ಸ್ಥಳೀಯ ಅಂಗಡಿಯವರ ಬಳಿ ವಿಚಾರಿಸಿ ಕೊನೆಗೂ ತನ್ನ ಹಳೆಯ ಮನೆಯನ್ನು ಹುಡುಕಿಕೊಂಡು ಹೋಗಿದ್ದಾರೆ. ಮನೆಯ ಬಾಗಿಲಿಗೆ ಬಂದು ನಿಂತ ಹಿರಿಯ ಮಗನನ್ನು ಕಂಡ ತಾಯಿಯ ಕಣ್ಣಲ್ಲಿ ಆನಂದಬಾಷ್ಪ ಹರಿದಿದೆ. ಮನೆಯವರೆಲ್ಲರೂ ಸೇರಿ ಮಗನನ್ನು ಅತ್ಯಂತ ಸಂತಸದಿಂದ ಬರಮಾಡಿಕೊಂಡಿದ್ದಾರೆ. ಸತೀಶ್‌ಗೆ ಕೇವಲ ಹಿಂದಿ ಮಾತ್ರ ಬರುತ್ತಿದ್ದು, ಇತ್ತ ತಾಯಿಗೆ ಹಿಂದಿ ಗೊತ್ತಿಲ್ಲದ ಕಾರಣ ಇಬ್ಬರ ನಡುವೆ ಭಾಷೆಯ ಸಮಸ್ಯೆ ಎದುರಾಗಿತ್ತು.
ಆದರೂ ಭಾಷೆಯ ಹಂಗಿಲ್ಲದೆ ತಾಯಿ ಮತ್ತು ಸಹೋದರರನ್ನು ಸತೀಶ್ ಗುರುತಿಸಿ ಅಪ್ಪಿಕೊಂಡಿದ್ದಾರೆ. ವರ್ಷಗಳ ಕಾಲ ಮಗನಿಗಾಗಿ ದೇವರಲ್ಲಿ ಹರಕೆ ಹೊತ್ತಿದ್ದ ತಾಯಿಯ ಆಶಯ ಕೊನೆಗೂ ಈಡೇರಿದೆ.






