ವಾಮಾಚಾರದ ಆರೋಪ: ಮನೆಯಿಂದ ಮಹಿಳೆಯನ್ನು ಹೊರಗೆಳೆದು ತಂದು ಹತ್ಯೆ ಮಾಡಿದ ಗ್ರಾಮಸ್ಥರು
Views: 56
ಕನ್ನಡ ಕರಾವಳಿ ಸುದ್ದಿ: ವಾಮಾಚಾರ ಮಾಡುತ್ತಿದ್ದ ಆರೋಪದ ಮೇಲೆ 55 ವರ್ಷದ ಮಹಿಳೆಯನ್ನು ಗ್ರಾಮಸ್ಥರ ಗುಂಪೊಂದು ಹೊಡೆದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ರಾತ್ರಿ ಈ ಪ್ರಕರಣ ನಡೆದಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಇದರಲ್ಲಿ 11 ಜನರ ಹೆಸರನ್ನು ಉಲ್ಲೇಖಿಸಿದ್ದರೆ, ಇನ್ನುಳಿದಂತೆ ಹಲವು ಅಪರಿಚಿತರ ವಿರುದ್ಧವೂ ಕೇಸ್ ದಾಖಲಿಸಿಕೊಂಡಿದ್ದಾರೆ.
ಗಯಾ ಜಿಲ್ಲೆಯ ಫತೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ನೌ ನಗರ ಗ್ರಾಮದಲ್ಲಿ ಈ ಪ್ರಕರಣ ದಾಖಲಾಗಿದೆ. ಸುಮಾರು12 ಜನರ ಗುಂಪೊಂದು ಮಹಿಳೆ ವಾಸವಿದ್ದ ಮನೆಯಿಂದ ಹೊರಗೆಳೆದು ತಂದು ಡಾಂಬರು ರಸ್ತೆಯಲ್ಲೇ ಆಕೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೆ, ಆಕೆಯನ್ನು ಸಾರ್ವಜನಿಕವಾಗಿ ನಿಂದಿಸಿ ಕೊಂದಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಮತ್ತು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದ ಮಹಿಳೆಯನ್ನು ಬಚ್ಚು ಮಾಂಝಿ ಎಂಬ ವ್ಯಕ್ತಿಯ ಪತ್ನಿ ಬುಲ್ಕಿ ದೇವಿ ಎಂದು ಗುರುತಿಸಲಾಗಿದೆ. ಹಲ್ಲೆಯಿಂದ ಬುಲ್ಕಿ ದೇವಿಯ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ವೇಳೆ ಆಕೆಯನ್ನು ಆ ಗುಂಪಿನಿಂದ ಬಿಡಿಸಲು ಹೋಗಿದ್ದ ಇನ್ನೋರ್ವ ಮಹಿಳೆ ಮತ್ತು ಪುರುಷ ಗಾಯಗೊಂಡಿದ್ದಾರೆ.






