ವಾಣಿಶ್ರೀ ಗರ್ಭಿಣಿ ಆಗಿದ್ದಾಗಲೇ ಡಿವೋರ್ಸ್: ಮಗಳು ಖುಷಿ ಎದುರು ಟಾಕ್ಸಿಕ್ ರಿಲೇಷನ್‌ಶಿಪ್ ಬಗ್ಗೆ ಮಾತಾಡಿದ್ದೇನು?
Views: 30
ಕನ್ನಡ ಚಿತ್ರನಟಿ ವಾಣಿಶ್ರೀ ಮಗಳು ಖುಷಿ ಎದುರು ತಮ್ಮ ಜೀವನದ ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಮದುವೆ, ಟಾಕ್ಸಿಕ್ ರಿಲೇಷನ್‌ಶಿಪ್, ಡಿವೋರ್ಸ್ ಎಲ್ಲದರ ಬಗ್ಗೆ ಮೌನ ಮುರಿದಿದ್ದಾರೆ.

ಕನ್ನಡದಲ್ಲಿ 300ಕ್ಕೂ ಅಧಿಕ ಸಿನಿಮಾ ಹಾಗೂ ಸಾಕಷ್ಟು ಧಾರಾವಾಹಿಗಳಲ್ಲಿ ವಾಣಿಶ್ರೀ ನಟಿಸಿದ್ದಾರೆ. ಡಾ. ರಾಜ್‌ಕುಮಾರ್ ಕುಟುಂಬದ ಜೊತೆ ವಾಣಿಶ್ರೀ ಅವರಿಗೆ ಆತ್ಮೀಯ ಒಡನಾಟವಿದೆ. ‘ಓಂ’ ಚಿತ್ರದಲ್ಲಿ ಶಿವಣ್ಣ ಸಹೋದರಿ ಪಾತ್ರದಲ್ಲಿ ವಾಣಿ ಹರಿಶ್ಚಂದ್ರ ನಟಿಸಿದ್ದರು. ‘ಆಕಸ್ಮಿಕ’ ಚಿತ್ರದ ಸಣ್ಣ ಪಾತ್ರದಲ್ಲಿ ಮಿಂಚಿದ್ದರು. ರಾಘಣ್ಣನ ಸಹೋದರಿ ಆಗಿ ಕೂಡ ನಟಿಸಿದ್ದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ವಾಣಿಶ್ರೀ ಕ್ಲಾಸ್‌ಮೇಟ್ಸ್.. ಪುನೀತ್ ಮಗಳು ಧೃತಿ ಹಾಗೂ ವಾಣಿಶ್ರೀ ಮಗಳು ಖುಷಿ ಕೂಡ ಶಾಲೆಯಲ್ಲಿ ಕ್ಲಾಸ್‌ಮೇಟ್ ಆಗಿದ್ದರು.
ಇದೀಗ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮತ್ತಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಶೇಷ ಅಂದ್ರೆ ವಾಣಿಶ್ರೀ ಪುತ್ರಿ ಖುಷಿ ನಿರೂಪಣೆ ಮಾಡಿದ್ದು ತಾಯಿ-ಮಗಳು ತಮ್ಮ ಜೀವನದ ನೋವಿನ ಸಂಗತಿಯನ್ನು ಮಾತನಾಡುತ್ತಾ ಹೋಗಿದ್ದಾರೆ.
ವಾಣಿಶ್ರೀ ಗರ್ಭಿಣಿ ಆಗಿದ್ದಾಗಲೇ ಡಿವೋರ್ಸ್ ಆಗಿತ್ತು. ಇದೇ ಮೊದಲ ಬಾರಿಗೆ ತಮ್ಮ ಪತಿಯ ಹೆಸರನ್ನು ಬಹಿರಂಗ ಪಡಿಸಿದ್ದಾರೆ.
ನಮ್ಮದು ಲವ್ ಮ್ಯಾರೇಜ್ ಅಲ್ಲ.. ನಾನು ಸಿನಿಮಾಗಳಲ್ಲೇ ಇದ್ದುಬಿಡ್ತೀನಿ, ಮದುವೆ ಆಗಲ್ಲ ಎಂದು ಅಮ್ಮನಿಗೆ ಆತಂಕ ಕಾಡಿತ್ತು. ಅದೇ ಸಮಯದಲ್ಲಿ ಅನಿಲ್(ಮಾಜಿ ಪತಿ) ಬಂದು ನನ್ನನ್ನು ಮದುವೆ ಆಗುವುದಾಗಿ ಹೇಳಿದ್ರು. ನಿಮ್ಮ ಮನೆ ಮಗನ ತರ ಇರ್ತೀನಿ ಎಂದು ಅಮ್ಮನಿಗೆ ಅಂದ್ರು.. ಅದನ್ನು ನಂಬಿ ಎಲ್ಲರೂ ಒಪ್ಪಿ ಮದುವೆ ಆಯ್ತು.. ಆರಂಭದಲ್ಲೇ ಇನ್ಮುಂದೆ ಸಿನಿಮಾಗಳಲ್ಲಿ ನಟಿಸ್ಬಾರ್ದು ಎಂದು ಷರತ್ತು ಹಾಕಿದ್ರು ಎಂದು ವಾಣಿಶ್ರೀ ನೆನಪಿಸಿಕೊಂಡಿದ್ದಾರೆ. ಮದುವೆ ಬಳಿಕ ಎಲ್ಲವೂ ಬದಲಾಯಿತು.. ನನ್ನ ಬಳಿ ಮೊಬೈಲ್ ಫೋನ್ ಇರಲಿಲ್ಲ. ಲ್ಯಾಂಡ್‌ಲೈನ್ ಫೋನ್‌ನಲ್ಲೇ ಮಾತನಾಡಬೇಕಿತ್ತು. ಅದರ ಲಿಂಕ್ ಅನಿಲ್ ಆಫೀಸ್ ಫೋನ್‌ಗೆ ಇತ್ತು. ಹಾಗಾಗಿ ನಾನು ಏನೇ ಮಾತನಾಡಿದರೂ ಅವ್ರು ಅದನ್ನು ಕೇಳುತ್ತಿದ್ರು ಎಂದು ತಮ್ಮ ಟಾಕ್ಸಿಕ್ ರಿಲೇಷನ್‌ಶಿಪ್ ಬಗ್ಗೆ ವಾಣಿಶ್ರೀ ಮಾತನಾಡಿದ್ದಾರೆ. “ಮದುವೆ ಆದಾಗ ಮಲ್ಲೇಶ್ವರಂನಲ್ಲಿ ನಮ್ಮ ಮನೆಯಿತ್ತು.. ಸ್ವಲ್ಪ ದೂರದಲ್ಲೇ ಅಮ್ಮನ ಮನೆ ಇತ್ತು. ಆಗಾಗ್ಗೆ ಬರ್ತಿದ್ರು. ಇದೇ ಕಾರಣಕ್ಕೆ ಅನಿಲ್ ಬಸವೇಶ್ವರನಗರಕ್ಕೆ ಮನೆ ಬದಲಾಯಿಸಿದ್ರು” ಎಂದು ಹೇಳಿದ್ದಾರೆ. ಇಂಡಸ್ಟ್ರಿಯಲ್ಲಿ ಇದ್ದೀನಿ ಎನ್ನುವ ಕಾರಣಕ್ಕೆ ಮಗು ಮಾಡಿಕೊಳ್ತಿಲ್ಲ ಎನ್ನುವ ಮಾತು ಬಂತು.. ಆದ್ರೆ ನಾನು ಕೊಂಚ ಸಮಯ ಕಾಯೋಣ, ಮೊದಲು ನಮ್ಮಿಬ್ಬರ ನಡುವೆ ಹೊಂದಾಣಿಕೆ ಆಗಲಿ ಎಂದುಕೊಂಡಿದ್ದೆ. ನಮ್ಮ ಅತ್ತೆ ಕರ್ಕೊಂಡ್ ಹೋಗಿ ತೊಟ್ಟಿಲು ತೂಗಿಸುವುದು, ಪೂಜೆ ಮಾಡಿಸುವುದು ಮಾಡ್ತಿದ್ರು.. ಆದ್ರೆ ನಾನು ಮಕ್ಕಳು ಆಗದಂತೆ ಮಾತ್ರೆ ತಗೊತ್ತಿದ್ದೆ ಎಂದು ವಾಣಿಶ್ರೀ ನೋವಿನ ಸಂಗತಿ ಬಿಚ್ಚಿಟ್ಟಿದ್ದಾರೆ. ನಿನಗೆ 5 ತಿಂಗಳ(ನಾನು ಗರ್ಭಿಣಿ ಆಗಿದ್ದಾಗ) ಮಗುವಾಗಿದ್ದಾಗ ಅನಿಲ್ ವಿರುದ್ಧ ಅರೆಸ್ಟ್ ವಾರಂಟ್ ಬಂದಿತ್ತು. ಅವಳನ್ನು ಕರ್ಕೊಂಡ್ ಹೋಗಿ ಮದುವೆಯಾಗಿ ಬೇರೆ ಮನೆಯಲ್ಲಿಟ್ಟಿದ್ರು.. ಅವಳು ಆತ್ಮಹತ್ಯೆಗೆ ಯತ್ನಿಸಿ ಕೇಸ್ ಆಗಿತ್ತು.. ಅಲ್ಲಿವರೆಗೆ ಈ ಬಗ್ಗೆ ನನಗೆ ಗೊತ್ತಿರಲಿಲ್ಲ ಎಂದು ವಿವರಿಸಿದ್ದಾರೆ. ಅನಿಲ್ ಕುಮಾರ್ ಯಾರು? ನಾನು ಕೂಡ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಮೊದಲ ಬಾರಿ ಅವರ ಫೋಟೊ ನೋಡಿದ್ದು ಎಂದು ಖುಷಿ ಹೇಳಿದ್ದಾರೆ. ನೀನು ಹುಟ್ಟಿದ ಬಳಿಕ ನಮ್ಮತ್ತೆ, ಆ ವ್ಯಕ್ತಿ ಬಂದು ನೋಡಿದ್ರು.. ಚಿನ್ನದ ಚೈನ್ ಏನೋ ತಂದಿದ್ರು.. ಏನು ಬೇಡ ತಗೊಂಡು ಹೋಗಿ ಎಂದೆ. ಬಳಿಕ ಆ ವ್ಯಕ್ತಿ ಹೋದ್ರು.. ಅದೇ ಸಮಯದಲ್ಲಿ ನಾನು ಗಟ್ಟಿ ನಿರ್ಧಾರ ತೆಗೆದುಕೊಂಡೆ.. ಹೀಗೆ ಮುಂದುವರೆದರೆ ನನಗೆ ಸ್ವಾತಂತ್ರ್ಯ ಇರಲ್ಲ, ಗೌರವ ಇರಲ್ಲ.. ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎಂದು ನಿರ್ಧರಿಸಿದೆ. ಹಾಗಾಗಿ ನೀನು 5 ತಿಂಗಳು ಮಗುವಾಗಿದ್ದಾಗ ಒಂದು ಸ್ಯಾಂಟ್ರೋ ಕಾರ್‌ನಲ್ಲಿ ಎಲ್ಲಾ ವಸ್ತುಗಳನ್ನು ಗಂಟುಮೂಟೆ ಕಟ್ಟಿಕೊಂಡು ಅಲ್ಲಿಂದ ಹೊರಟುಬಿಟ್ಟೆ ಎಂದು ವಾಣಿಶ್ರೀ ಹೇಳಿದ್ದಾರೆ. ನನಗೆ 18 ವರ್ಷ ತುಂಬಿದ ಮೇಲೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮೆಸೇಜ್ ಬಂತು ಎಂದು ಖುಷಿ ನೆನಪಿಸಿಕೊಂಡಿದ್ದಾರೆ. “ಹಾಯ್.. ನಾನು ನಿಮ್ಮ ಅಪ್ಪ.. ಎಂದು ನನ್ನದೊಂಡು ಫೋಟೊ ಹಾಕಿ ಮೆಸೇಜ್ ಕಳಿಸಿದ್ರು, ಅದನ್ನು ನಿನಗೆ ತೋರಿಸಿದಾಗ ನೀನು ಮಾತನಾಡುವಂತಿದ್ದರೆ ಮಾತನಾಡು ಅಂತ ಹೇಳಿದ್ದೆ. ಹೋಗಿ ಭೇಟಿ ಆಗುವಂತಿದ್ದರೆ ಆಗು, ಫೋನ್ ಮಾಡುವಂತಿದ್ದರೆ ಮಾಡಿ ಮಾತನಾಡು ಎಂದು ಹೇಳಿದ್ದಾಗೆ ಖುಷಿ” ಮೆಲುಕು ಹಾಕಿದ್ದಾರೆ. ನಾನು ಫೋನ್ ಮಾಡಿ ಮಾತನಾಡ್ದೆ. ಇವತ್ತಿಗೂ ನನ್ನ ವಾಟ್ಸಪ್ ನಂಬರ್ ಅವರ ಬಳಿಯಿದೆ. ನಾನು ಆ ವ್ಯಕ್ತಿ ಜೊತೆ ಮಾತನಾಡಿದಾಗ “ನಿಮ್ಮ ಅಮ್ಮನನ್ನು ಬಿಡಬೇಕು.. ಅಜ್ಜಿನ, ನಾಯಿನ ಬಿಟ್ಟು ಬರಬೇಕು. ಇಂಡಸ್ಟ್ರಿ ಬಿಟ್ಟು ಡೆಲ್ಲಿಗೆ ಬರಬೇಕು.. ನಿನ್ನನ್ನು ಚೆನ್ನಾಗಿ ನೋಡ್ಕೊತ್ತೀನಿ, ವಿದ್ಯಾಭ್ಯಾಸದ ಜವಾಬ್ದಾರಿ ನನ್ನದು ಅಂದ್ರು.. ನಿನಗೆ ಯಾವ ತರ ಲೈಫ್ ಸ್ಟೈಲ್ ಬೇಕೋ ನಾನು ಕೊಡ್ತೀನಿ ಅಂದ್ರು.. ನಾನು ಈ ವಿಚಾರ ಬಂದು ನಿನ್ನ ಬಳಿ ಹೇಳ್ದೆ ಎಂದು ಖುಷಿ ಹೇಳಿದ್ದಾರೆ. “ಇಷ್ಟೆಲ್ಲಾ ಹೇಳಿದ್ದು ನನಗೆ ಗೊತ್ತಿಲ್ಲ, ಯಾಕಂದ್ರೆ ನೀನು ಏನು ಮಾತನಾಡ್ದೆ ಅಂತ ನಾನು ಅವತ್ತು ಕೇಳಿರಲಿಲ್ಲ” ಎಂದು ವಾಣಿಶ್ರೀ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ ಮಾತಿಗೆ ನಾನು ಒಪ್ಪಲಿಲ್ಲ.. ನಿನ್ನನ್ನು, ಅಜ್ಜಿಯನ್ನು ಅದ್ರಲ್ಲೂ ನಾಯಿಯನ್ನು ಬಿಟ್ಟು ಹೋಗುವ ಮಾತೇಯಿಲ್ಲ. ನಾನು ಇಂಡಿಪೆಂಡೆಂಟ್ ಆಗಿದ್ದೀನಿ, ಮತ್ತೆ ಆ ವ್ಯಕ್ತಿಯ ಹತೋಟಿಗೆ ಹೋಗುವ ಮಾತೇಯಿಲ್ಲ. ಆ ವ್ಯಕ್ತಿ ಒಂದು ದಿನ ಕೂಡ ನನ್ನ ಬಂದು ನೋಡಿಲ್ಲ. ಈಗ ಡೆಲ್ಲಿಗೆ ಬಾ ಅಂದ್ರೆ ಹೋಗ್ತೀನಾ?.. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನನ್ನ ಫೋಟೊಗೆ ಲೈಕ್ಸ್, ಕಾಮೆಂಟ್ಸ್ ಮಾಡ್ತಿದ್ರು.. ನಾನು ಮಾತ್ರ ಪ್ರತಿಕ್ರಿಯಿಸಲಿಲ್ಲ ಎಂದು ಖುಷಿ ತಿಳಿಸಿದ್ದಾರೆ.






