ವಕ್ವಾಡಿ ಪ್ರಾಥಮಿಕ ಶಾಲೆ, ಶತಾಬ್ದಿ-2023- ವಿದ್ಯಾರ್ಥಿಗಳೊಂದಿಗೆ ಪೋಷಕರು ಜೊತೆಗೂಡಿದಾಗ ಮಕ್ಕಳ ಭವಿಷ್ಯ ಉನ್ನತ ಮಟ್ಟಕ್ಕೆ_ಕೆ.ಜಯಪ್ರಕಾಶ ಹೆಗ್ಡೆ

Views: 37
ಕುಂದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಕ್ವಾಡಿ, ಶತಮಾನೋತ್ಸವ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಶತಮಾನೋತ್ಸವ ಸಂಭ್ರಮ ಶತಾಬ್ದಿ- 2023 ಕಾರ್ಯಕ್ರಮ ಡಿಸೆಂಬರ್ 24ರಂದು ವಕ್ವಾಡಿಯಲ್ಲಿ ಸಂಭ್ರಮದಿಂದ ನಡೆಯಿತು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಮಕ್ಕಳೊಂದಿಗೆ ಪೋಷಕರು ಜೊತೆಗೂಡಿದಾಗ ಮಕ್ಕಳ ಭವಿಷ್ಯ ಉನ್ನತ ಮಟ್ಟಕ್ಕೇರುತ್ತದೆ, ಹಾಗೆಯೇ ಶಿಕ್ಷಕರಿಂದ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದಾಗ ವಿದ್ಯಾರ್ಥಿಗಳು ಉತ್ತಮ ಪ್ರಜೆಯಾಗುವುದಲ್ಲದೆ ಜೊತೆಗೆ ಮನೆಯವರು ಉತ್ತಮ ಸಂಸ್ಕಾರ ಮಕ್ಕಳಿಗೆ ನೀಡಿದಾಗ ಬಲಿಷ್ಠ ಸಮಾಜ ನಿರ್ಮಿಸಲು ಸಾಧ್ಯ.
ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಗೆ ನೈತಿಕ ಶಿಕ್ಷಣ, ಜೀವನ ಕೌಶಲ ಕಲಿಕೆಗೆ ಒತ್ತು ನೀಡಬೇಕು, ಮಕ್ಕಳಲ್ಲಿ ಯಾವುದರಲ್ಲಿ ಆಸಕ್ತಿ ಇದೆಯೋ ಅದರ ಬಗ್ಗೆ ಪ್ರೋತ್ಸಾಹಿಸಿ, ಅವರ ಮೇಲೆ ಯಾವುದೇ ಕಾರಣಕ್ಕೂ ಒತ್ತಡ ಹೇರಬೇಡಿ ಮಕ್ಕಳ ಭವಿಷ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಎಂದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಅವರು ಮಾತನಾಡಿ, ಸರ್ಕಾರಿ ಶಾಲೆಯನ್ನು ನೂರು ವರ್ಷ ನಡೆಸಿಕೊಂಡು ಬಂದಿರುವುದೇ ದೊಡ್ಡ ಸಾಧನೆ. ಕನ್ನಡ ಮಾಧ್ಯಮದ ಜೊತೆಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಉಳಿಸಬೇಕು. ಸರಕಾರಿ ಶಾಲೆಗೆ ಉತ್ತಮ ಸೌಲಭ್ಯಗಳನ್ನು ನೀಡಿದಾಗ ಉತ್ತಮ ಅಭಿವೃದ್ಧಿ ಸಾಧಿಸಿ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕರಾದ ಕರುಣಾಕರ್ ಶೆಟ್ಟಿ, ಗೌರಿ ಟೀಚರ್, ಮಹಾಬಲ ಶೆಟ್ಟಿಗಾರ, ಆರೂರು ತಿಮ್ಮಪ್ಪ ಶೆಟ್ಟಿ, ದಿವಾಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶಾಲೆಗೆ ಅತಿ ಹೆಚ್ಚು ದೇಣಿಗೆ ನೀಡಿದ ಕಂಪ್ಯೂಟರ್ ಕೊಠಡಿ ಪ್ರಾಯೋಜಕರಾದ ವಕ್ವಾಡಿ ವಿಶ್ವನಾಥ್ ಶೆಟ್ಟಿ ಹಾಗೂ ಗುಲಾಬಿ ಆನಂದ ಶೆಟ್ಟಿ ಅವರನ್ನು ಮತ್ತು 25000 ಕ್ಕಿಂತ ಹೆಚ್ಚು ದೇಣಿಗೆ ನೀಡಿದವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ನೂತನ ಕಂಪ್ಯೂಟರ್ ಕಲಿಕಾ ಕೇಂದ್ರವನ್ನು ಉದ್ಘಾಟಿಸಲಾಯಿತು.
ಸಭೆಯಲ್ಲಿ ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್ ಶೆಟ್ಟಿಗಾರ್, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅನಂತಪದ್ಮನಾಭ ಶೆಟ್ಟಿಗಾರ್, ಕಾಳಾವರ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ ,ಪಂಚಾಯತ್ ಸದಸ್ಯೆ ಭಾರತಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭ ಎಸ್ ಶೆಟ್ಟಿ, ಕ.ರಾ.ಪ್ರಾ.ಶಿ.ಸಂಘ(ರಿ) ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ, ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಸದಾನಂದ ಶೆಟ್ಟಿ, ಉದ್ಯಮಿ ವಿಶ್ವನಾಥ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತ್ಯರಂಜನ್ ಹೆಗ್ಡೆ, ವಿದ್ಯಾರ್ಥಿ ನಾಯಕ ಪೃಥ್ವಿ ಉಪಸ್ಥಿತರಿದ್ದರು.
ಬಹುಮಾನ ವಿತರಣಾ ಪಟ್ಟಿಯನ್ನು ಶಿಕ್ಷಕಿ ನಯನ ವಾಚಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತ್ಯರಂಜನ್ ಹೆಗಡೆ ಸ್ವಾಗತಿಸಿದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ಗಣೇಶ್ ಶೆಟ್ಟಿ ವರದಿ ವಾಚಿಸಿದರು. ಉಪನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ ಹಾಗೂ ಶಿಕ್ಷಕಿ ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಸದಾನಂದ ಶೆಟ್ಟಿ ವಂದಿಸಿದರು.
ಪ್ರೌಢಶಾಲೆ, ಅಂಗನವಾಡಿ,ಎಲ್ ಕೆಜಿ, ಯುಕೆಜಿ,ಶಾಲಾ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಹಳೆ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ನಡೆಯಿತು.






