ರಾಜಕೀಯ

ಮೋದಿ-ಟ್ರಂಪ್ ಮಹತ್ವದ ಮಾತುಕತೆ: ಭಾರತದ ಮೇಲಿನ ಪ್ರತಿ ಸುಂಕ ಶೇ.18ಕ್ಕಿಳಿಸಿದ ಅಮೆರಿಕ

Views: 57

ಕನ್ನಡ ಕರಾವಳಿ ಸುದ್ದಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿ ಜತೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಮಹತ್ವದ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಟ್ರಂಪ್ ತಮ್ಮದೇ ಒಡೆತನದ ಸಾಮಾಜಿಕ ಜಾಲತಾಣ ಟ್ರೂಥ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೋದಿ ಅವರು ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ಅವರ ದೇಶದ ಪ್ರಭಾವಶಾಲಿ ಮತ್ತು ಗೌರವಾನ್ವಿತ ನಾಯಕ ಕೂಡಾ. ವ್ಯಾಪಾರ, ರಷ್ಯಾ ಮತ್ತು ಉಕ್ರೇನ್ ಜತೆಗಿನ ಯುದ್ಧವನ್ನು ಕೊನೆಗೊಳಿಸುವುದೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಾವು ಮಾತನಾಡಿದ್ದೇವೆ. ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮತ್ತು ಅಮೆರಿಕ ಮತ್ತು ವೆನಿಜುವೆಲಾದಿಂದ ಹೆಚ್ಚಿನದ ತೈಲ ಖರೀದಿಸಲು ಅವರು ಒಪ್ಪಿಕೊಂಡಿದ್ದಾರೆ.

ಇದು ಉಕ್ರೇನ್‌ನಲ್ಲಿ ಯುದ್ಧ ಕೊನೆಗೊಳಿಸಲು ಸಹಾಯ ಮಾಡುತ್ತದೆ. ಅಲ್ಲಿ ಪ್ರತಿ ವಾರ ಸಾವಿರಾರು ಜನರು ಸಾಯುತ್ತಿದ್ದಾರೆ. ಪ್ರಧಾನಿ ಮೋದಿಯವರೊಂದಿಗಿನ ಸ್ನೇಹ ಮತ್ತು ಗೌರವದಿಂದ ಮತ್ತು ಅವರ ಕೋರಿಕೆಯಂತೆ, ತಕ್ಷಣವೇ ಜಾರಿಗೆ ಬರುವಂತೆ ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಿದ್ದೇವೆ. ಆ ಮೂಲಕ ಅಮೆರಿಕ ಕಡಿಮೆ ಪ್ರತಿ ಸುಂಕ ಅಂದರೆ, 25%ರಿಂದ 18%ಕ್ಕೆ ಇಳಿಸಲಿದೆ. ಅವರು ನಮ್ಮ ವಿರುದ್ಧ ಸುಂಕಗಳು ಮತ್ತು ಸುಂಕೇತರ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸಲಿದ್ದಾರೆ.

ಪ್ರಧಾನಿ ಮೋದಿ ಅವರು ಅಮೆರಿಕದಿಂದ ಹೆಚ್ಚು ಖರೀದಿಸಲು ಬದ್ಧರಾಗಿದ್ದಾರೆ. ಜತೆಗೆ 500 ಬಿಲಿಯನ್ ಡಾಲರ್‌ಗಳಿಗೂ ಹೆಚ್ಚಿನ ಇಂಧನ, ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತು ಇತರ ಹಲವು ಉತ್ಪನ್ನಗಳನ್ನು ಖರೀದಿಸಲು ಒಪ್ಪಿಕೊಂಡಿದ್ದಾರೆ. ಭಾರತದೊಂದಿಗಿನ ನಮ್ಮ ಅದ್ಭುತ ಸಂಬಂಧ ಮುಂದೆ ಇನ್ನಷ್ಟು ಬಲಗೊಳ್ಳುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ.

Related Articles

Back to top button
error: Content is protected !!