ಮಹಿಳೆಗೆ ದೆವ್ವ ಹಿಡಿದಿದೆ ಎಂದು ಮದ್ಯ ಕುಡಿಸಿ, ಬೀಡಿ ಸೇದುವಂತೆ ಒತ್ತಾಯಿಸಿ ಕಿರುಕುಳ:ಮಾಂತ್ರಿಕ ಅರೆಸ್ಟ್
Views: 83
ಕನ್ನಡ ಕರಾವಳಿ ಸುದ್ದಿ: ಮಾಟ ಮಂತ್ರದ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ದೆವ್ವ ಹಿಡಿದಿದೆ ಎಂದು ಹೇಳಿ ಅದನ್ನು ಬಿಡಿಸಲು ಮದ್ಯ ಕುಡಿಸಿ, ಬೀಡಿ ಸೇದುವಂತೆ ಒತ್ತಾಯಿಸಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ.
ಅಲ್ಲದೇ ಆಕೆಗೆ ಹಲವಾರು ಗಂಟೆಗಳ ಕಾಲ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ. ಇದರಿಂದ ಆಕೆಯ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂದು ಮಹಿಳೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ದೆವ್ವ ಹಿಡಿದಿದೆ ಎಂದು ಹೇಳಿ ಮಹಿಳೆಯೊಬ್ಬರನ್ನು ಆಕೆಯ ಗಂಡ ಮತ್ತು ಕುಟುಂಬದವರು ಸೇರಿ ಮಾಂತ್ರಿಕನ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಮಹಿಳೆಯ ದೇಹದಿಂದ ದೆವ್ವವನ್ನು ಹೊರಹಾಕಲು ಮಾಂತ್ರಿಕನಿಂದ ಮಹಿಳೆಗೆ ಹಲವು ಗಂಟೆಗಳ ಚಿತ್ರಹಿಂಸೆ ನೀಡಲಾಗಿದೆ.
ಬಳಿಕ ಮಹಿಳೆಯ ಮಾನಸಿಕ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಮಾಂತ್ರಿಕ ಶಿವದಾಸ್ (54), ಮಹಿಳೆಯ ಸಂಗಾತಿ ಅಖಿಲ್ ದಾಸ್ (26) ಮತ್ತು ಅವರ ತಂದೆ ದಾಸ್ (54)ನನ್ನು ಬಂಧಿಸಿದ್ದಾರೆ.
ಮಹಿಳೆಯ ತಂದೆ ನೀಡಿರುವ ದೂರಿನ ಪ್ರಕಾರ, ಸಂಗಾತಿಯ ತಾಯಿ ಮಾಂತ್ರಿಕನನ್ನು ಕರೆತಂದು ಮಾಟಮಂತ್ರಕ್ಕೆ ವ್ಯವಸ್ಥೆ ಮಾಡಿದ್ದರು. ಮಹಿಳೆಯ ದೇಹವು ಆಕೆಯ ಮೃತ ಸಂಬಂಧಿಕರ ದುಷ್ಟಶಕ್ತಿಗಳಿಂದ ಆವರಿಸಲ್ಪಟ್ಟಿದೆ ಎಂದು ಅವರು ಆರೋಪಿಸಿದ್ದರು. ವಿಧಿವಿಧಾನಗಳು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಿ ಮಧ್ಯ ರಾತ್ರಿವರೆಗೆ ನಡೆದಿದೆ. ಕೊನೆಯಲ್ಲಿ ಮಹಿಳೆ ಪ್ರಜ್ಞಾಹೀನಳಾಗಿದ್ದಾಳೆ. ಮಹಿಳೆಗೆ ಮದ್ಯ ನೀಡಿ, ಬಲವಂತವಾಗಿ ಬೀಡಿ ಸೇದುವಂತೆ ಮಾಡಲಾಗಿದೆ. ಪವಿತ್ರ ಬೂದಿಯನ್ನು ಕುಡಿಸಿದ್ದಾರೆ. ಹಲವಾರು ರೀತಿಯ ದೈಹಿಕ ಹಿಂಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ತಿರುವಲ್ಲಾದ ಮುತ್ತೂರು ಪ್ರದೇಶದಲ್ಲಿ ಬಂಧಿಸಲಾಗಿದೆ. ಸಹ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ.






