ಸಾಂಸ್ಕೃತಿಕ

ಮಸ್ಕತ್ ನಲ್ಲಿ ಭರ್ಜರಿ ಪ್ರದರ್ಶನ ಕಂಡ “ಶಿವದೂತೆ ಗುಳಿಗೆ”

Views: 0

✍🏻 ಬರಹ:- ಪಿ.ಎಸ್.ರಂಗನಾಥ.

ಕರಾವಳಿ ಫ್ರೆಂಡ್ಸ್ ಮಸ್ಕತ್” ಅವರು ಮಜಾನ್ ಇವೇಂಟ್ಸ್ ನ ಸಹಯೋಗದೊಂದಿಗೆ ಕಲಾಸಂಗಮ ತಂಡದ “ಶಿವದೂತೆ ಗುಳಿಗೆ” ನಾಟಕವನ್ನು ಮೇ 12 ರಂದು ಮಸ್ಕತ್ ನ ರೂವಿ ಪ್ರದೇಶದ ಅಲ್ ಫಲಾಜ್ ಹೋಟೆಲ್ ನ ಗ್ರಾಂಡ್ ಹಾಲ್ ಅಡಿಟೋರಿಯಂನಲ್ಲಿ ಕನ್ನಡ ಮತ್ತು ತುಳು ಭಾಷೆಯಲ್ಲಿ ಭರ್ಜರಿಯಾಗಿ ಪ್ರದರ್ಶನಗೊಂಡಿತು. ಮಸ್ಕತ್ ನಲ್ಲಿ ಒಂದೇ ದಿನ ಎರಡು ಸಾವಿರಕ್ಕೂ ಹೆಚ್ಚಿನ ಪ್ರೇಕ್ಷಕರು ನಾಟಕವನ್ನು ವೀಕ್ಷಿಸಿದ ದಾಖಲೆ ಸೃಷ್ಟಿಯಾಯಿತು. ಮಂಗಳೂರಿನ ಪ್ರಸಿದ್ಧ ನಾಟಕ ತಂಡ ಕಲಾಸಂಗಮದ ಸುಮಾರು 28 ಕಲಾವಿದರು ಶ್ರೀ ವಿಜಯ್ ಕುಮಾರ್ ಕೊಡಿಯಾಲಬೈಲ್ ರವರ ದಕ್ಷ ನಿರ್ದೇಶನದಲ್ಲಿ ಬೆಳಿಗ್ಗೆ 471 ನೇ ಪ್ರದರ್ಶನ ಕನ್ನಡ ಭಾಷೆಯಲ್ಲಿ ಮತ್ತು ಸಂಜೆ 472 ನೇ ಪ್ರದರ್ಶನ ತುಳು ಭಾಷೆಯಲ್ಲಿ ನಾಟಕ ಮೂಡಿ ಬಂತು.

ನಾಟಕ ಪ್ರಾರಂಭದ ಮುಂಚೆ ಸಂಪ್ರದಾಯದಂತೆ ದೀಪ ಬೆಳಗಿ ಕಾರ್ಯಕ್ರಮಕ್ಕೆ ಶುಭ ಕೋರಲಾಯಿತು. ಅತಿಥಿ  ಗಣ್ಯರಿಗೆ ಮತ್ತು ಪ್ರಾಯೋಜಕರಿಗೆ ಚಂಡೆ ಮದ್ದಳೆ ವಾದ್ಯದೊಂದಿಗೆ ಹೂಗುಚ್ಚ ನೀಡಿ ಸ್ವಾಗತ ಕೋರಲಾಯಿತು. ನಾಟಕದ ಸಂಘಟಕರಾದ ಕರಾವಳಿ ಫ್ರೆಂಡ್ಸ್ ಮಸ್ಕತ್ ನ ಹಿತೇಶ್ ಮಂಗಳೂರು , ಮೆಂಡನ್ , ರಾಜೇಂದ್ರ ಶೆಟ್ಟಿ, ರಮಾನಂದ ಶೆಟ್ಟಿ, ಮಂಜುನಾಥ್ ರಾವ್, ರವೀಂದ್ರ ಆಚಾರ್ಯ, ಶಿವಾನಂದ್ ಕೋಟ್ಯಾನ್, ರಾಮಕೃಷ್ಣ ಪ್ರಭು, ಸುಕುಮಾರ್ ಅಂಚನ್ ರವರು ಪ್ರಾಯೋಜಕರನ್ನು ಮತ್ತು ಅಥಿತಿ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ನೆರವು ನೀಡಿದ ಎಲ್ಲಾ ಪ್ರಾಯೋಜಕರಿಗೆ ನೆನಪಿನ ಕಾಣಿಕೆಗಳನ್ನು ನೀಡಿದರು.

ಇನ್ನೂ ನಾಟಕದ ಬಗ್ಗೆ ಹೇಳುವುದಾದರೆ, ಕರಾವಳಿಯಲ್ಲಿ ಹೆಚ್ಚು ಪೂಜಿಸಲ್ಪಡುವ ನಾಗಪ್ಪ, ಅಣ್ಣಪ್ಪ ಹಾಗೂ ತಿಮ್ಮಪ್ಪ ದೇವರುಗಳ ಅಸ್ತಿತ್ವ ಹಾಗೂ ಪ್ರಾಮುಖ್ಯತೆಯ ಕುರಿತು ಅಪ್ಪ ಮಗನಿಗೆ ವಿವರಿಸುವ ಒಂದು ಕಥೆಯಿಂದ ಆರಂಭಗೊಳ್ಳುವ ಈ ನಾಟಕವು, ಕೈಲಾಸ, ವೈಕುಂಠ ಹೀಗೆ ಪ್ರತಿ ಸನ್ನಿವೇಶಗಳನ್ನು ಅದ್ಭುತವಾಗಿ ಪ್ರೇಕ್ಷಕರ ಮುಂದೆ ತಂದು ಅದಕ್ಕೆ ತಕ್ಕಂತೆ ಕಲಾವಿದರ ಅದ್ಭುತ ನಟನೆ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. ಗುಳಿಗ ಎಂದರೆ ಯಾರು, ಆತನ ಜನ್ಮ ಏಕಾಯಿತು? ಹೇಗೆ ಆಯಿತು? ಭೂಮಿಯಲ್ಲಿ ಅವತರಿಸಲು ಇರುವ ಕಾರಣಗಳು ಅವನು ತಾಯಿ ಗರ್ಭದ ಮೂಲಕ ಪುನರ್ಜನ್ಮ ಪಡೆದು ಬಂದಿದ್ದು, ಅಧರ್ಮದ ದಾರಿಯಲ್ಲಿ ನಡೆದವರನ್ನು ಶಿಕ್ಷಿಸುವ ರೀತಿ, ಹಾಗೇ ಗುಳಿಗ ದೈವವು ಕರಾವಳಿ ಪ್ರದೇಶಕ್ಕೆ ಬಂದ ಕಾರಣ, ಕೊರ್ದಬ್ಬು ದೈವದ ಪಕ್ಕದಲ್ಲಿ ಸ್ಥಾನ ದೊರಕಿದ್ದು ಇದೆಲ್ಲವನ್ನು ಅದ್ಭುತವಾಗಿ ನಿರೂಪಿಸಲಾಯಿತು. ಕಾಂತಾರ ಚಲನಚಿತ್ರ “ಗುರುವ” ಖ್ಯಾತಿಯ “ಸ್ವರಾಜ್ ಶೆಟ್ಟಿ” ಗುಳಿಗನ ಪಾತ್ರದಲ್ಲಿ ವೇದಿಕೆ ಮೇಲೆ ಮಿಂಚಿ ಪ್ರೇಕ್ಷಕರ ಮನಗೆದ್ದಿದ್ದು ವಿಶೇಷವಾಗಿತ್ತು. ಕಳೆದ ವರ್ಷ ಬಿಡುಗಡೆಯಾದ ಕಾಂತಾರ ಸಿನಿಮಾದಲ್ಲಿನ ರಿಷಬ್ ಶೆಟ್ಟಿಯವರ ಗುಳಿಗ ಪಾತ್ರ ಜನರಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿತ್ತು ಹೀಗಾಗಿ ಗುಳಿಗ ದೈವದ ಪಾತ್ರಧಾರಿ ನಟ ಸ್ವರಾಜ್ ಶೆಟ್ಟಿಯವರು ನೇರವಾಗಿ ಜನರ ಮುಂದೆ ನಟಿಸಿ ಸಭಾಂಗಣದಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ಶಿವ ಪಾರ್ವತಿ, ವಿಷ್ಣು ಪರಮಾತ್ಮ, ಲಕ್ಷ್ಮಿದೇವಿ ಬ್ರಹ್ಮ, ನೆಲವುಳ್ಳ ಸಂಖ್ಯೆ, ಹೀಗೆ ಹಲವಾರು ಪಾತ್ರಧಾರಿಗಳು ಎಲ್ಲರೂ ಅದ್ಭುತವಾಗಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು.

ಸ್ಟೇಜ್ ಸೆಟ್ಟಿಂಗ್ಸ್ ತುಂಬಾ ವಿಭಿನ್ನವಾಗಿದ್ದಲ್ಲದೆ, ಆಕರ್ಷಕವಾಗಿತ್ತು. ಸನ್ನಿವೇಶಕ್ಕೆ ತಕ್ಕಂತೆ ಕ್ಷಣಮಾತ್ರದಲ್ಲಿ, ಬದಲಾಗುವ ಸೆಟ್ ಪ್ರೇಕ್ಷರ ಮನರಂಜಿಸಿತು. ಕೈಲಾಸ ಸನ್ನಿವೇಶ ಬದಲಾಗಿ ವೈಕುಂಠ ಬಂದಾಗ ಅದಕೆ ತಕ್ಕಂತೆ ಒಂದೇ ನಿಮಿಷದಲ್ಲಿ ಸೆಟ್ ಬದಲಾಯಿಸಿದ್ದು ತಂತ್ರಜ್ನರ ಕೈ ಚಳಕಕ್ಕೆ ಸಾಕ್ಷಿಯಾಗಿತ್ತು. ಪ್ರತಿ ಸನ್ನಿವೇಶಕ್ಕೆ ತಕ್ಕಂತೆ ಹತ್ತಾರು ಸೆಟ್ ಗಳನ್ನು ನಿರ್ಮಿಸಿ ಅದೆಲ್ಲವನ್ನು ನಿಯಂತ್ರಿಸಿದ್ದು ಮಾತ್ರ ಅದ್ಭುತ. ನಿರ್ದೇಶಕರು ನವೀನ ತಾಂತ್ರಿಕತೆಯನ್ನು ತುಂಬ ಚೆನ್ನಾಗಿ ನಾಟಕದಲ್ಲಿ ಬಳಸಿಕೊಂಡಿದ್ದಲ್ಲದೆ, ಕಥೆಗೆ ತಕ್ಕಂತಹ ಸೂಕ್ತ ಕಲಾತ್ಮಕ ವೇದಿಕೆ ಯನ್ನು ನಿರ್ಮಿಸಿದ್ದರು. ವಿವಿಧ ರೀತಿಯ ರಂಗ ಪರಿಕರಗಳು, ಬಣ್ಣ ಬಣ್ಣದ ಜಗಮಗಿಸುವ ಬೆಳಕು, ಅದ್ದೂರಿ ಸಂಗೀತ, ದೃಶ್ಯ ಸಂಯೋಜನೆ, ಸಂಭಾಷಣೆ, ನಟನೆ, ತಂತ್ರಜ್ನಾನ ಎಲ್ಲಾ ವಿಭಾಗಗಳಲ್ಲಿ ಒಂದು ಕೈ ಮೇಲೆ ಇತ್ತು. ಬಹಳ ದಿನಗಳ ನಂತರ ಮಸ್ಕತ್ ಪ್ರೇಕ್ಷಕರಿಗೆ ಈ ನಾಟಕವು ಭರಪೂರ ಮನರಂಜನೆಯನ್ನು ಈ ನಾಟಕ ನೀಡಿದ್ದಲ್ಲದೆ ಪ್ರೇಕ್ಷಕರಿಗೆ ಒಂದು ಅದ್ಭುತವಾದ ಅನುಭವವನ್ನು ನೀಡಿತು.

ಪ್ರೇಕ್ಷಕರ ಪ್ರಕಾರ, ನಾಟಕದಲ್ಲಿನ ರೋಚಕ ಅನುಭವ ನೀಡುವ ದೃಶ್ಯಾವಳಿಗಳು, ವೇದಿಕೆ ಮತ್ತು ಸಭಾಂಗಣದಲ್ಲಿ ನಟನೆಯಲ್ಲಿ ಅಬ್ಬರಿಸಿದ ಗುಳಿಗ ಪಾತ್ರಧಾರಿ ಸ್ವರಾಜ್ ಶೆಟ್ಟಿಯವರ ನಟನೆ ಹಲವು ದಿನಗಳಕಾಲ ಮರೆಯಾಗುವುದಿಲ್ಲ ಎನ್ನುವುದು ಬಹುತೇಕರ ಅಭಿಪ್ರಾಯವಾಗಿತ್ತು. ನಾಟಕ ನೋಡಿದವರೆಲ್ಲರೂ ಮೂಕವಿಸ್ಮಿತರಾಗಿ, ನಾಟಕದ ಅಭಿಪ್ರಾಯ ಹೇಳಲು ಶಬ್ದಗಳು ಸಾಲದು ಎಂದು ಆ ಗುಂಗಿನಿಂದ ಇನ್ನೂ ಹೊರಬಂದಿರಲಿಲ್ಲ. ಕೆಲ ಬಯಲು ಸೀಮೆ ಪ್ರದೇಶದವರಿಗೆ, ಕರಾವಳಿಯಲ್ಲಿ ಪೂಜಿಸಲ್ಪಡುವ ಗುಳಿಗ, ಪಂಜುರ್ಲಿಯ ದೈವಗಳ ಬಗ್ಗೆ ಹೆಚ್ಚಿನ ಮಾಹಿತಿಇರಲಿಲ್ಲ, ಕಾಂತಾರ ಸಿನಿಮಾದ ಮೂಲಕ ಸ್ವಲ್ಪ ಅರಿವು ಮೂಡಿಸಿಕೊಂಡಿದ್ದವರಿಗೆ. ಶಿವಧೂತೆ ಗುಳಿಗೆ ನಾಟಕ ಮಾತ್ರ, ಕರಾವಳಿಯ ದೈವಗಳ ಬಗ್ಗೆ ಅರ್ಥಪೂರ್ಣ ಚಿತ್ರಣವನ್ನು ಕಟ್ಟಿ ಕೊಟ್ಟಿತು. ಗುಳಿಗನ ಹುಟ್ಟು, ಪವಾಡಗಳು, ಆರಾಧನೆ ಎಲ್ಲವನ್ನು ಕೇವಲ ಎರಡೂವರೆ ಗಂಟೆಯಲ್ಲಿ ಕಣ್ಣ ಮುಂದೆ ತಂದಿಟ್ಟ ನಿರ್ದೇಶಕರ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿತ್ತು.

ಕಲಾಸಂಗಮ ಮಂಗಳೂರು ತಂಡಕ್ಕೆ ಪ್ರೇಕ್ಷಕರಿಂದ ಭರಪೂರ ಅಭಿನಂದನೆಗಳ ದೊರಕಿದ್ದಲ್ಲದೆ, ಶಿವದೂತೆ ಗುಳಿಗೆ ನಾಟಕವು ಅತಿ ಶೀಘ್ರವಾಗಿ ಒಂದು ಸಾವಿರ ಪ್ರದರ್ಶನಗಳನ್ನು ಕಾಣುವಂತಾಗಲಿ ಎಂದು ನೆರೆದಿದ್ದವರೆಲ್ಲರೂ ಹಾರೈಸಿದರು. ಕರಾವಳಿ ಫ್ರೆಂಡ್ಸ್ ಮಸ್ಕತ್ ಅವರು ಇನ್ನಷ್ಟು ಇಂತಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಆಶಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಅಭಿನಯಿಸಿದ ಎಲ್ಲಾ ಕಲಾವಿದರನ್ನು ಹಾಗೂ ತೆರೆಯ ಹಿಂದೆಯ ಕೆಲಸ ಮಾಡಿದ ಎಲ್ಲಾ ತಾಂತ್ರಿಕವರ್ಗದವರನ್ನು ಪ್ರೇಕ್ಷಕರಿಗೆ ಪರಿಚಯಿಸಿಕೊಟ್ಟರು. ಅವರು ಮಾಡುವ ಪಾತ್ರ ಮತ್ತು ಅವರ ಕೆಲಸಗಳ ಬಗ್ಗೆ ವಿವರಿಸಿದರು.

ಕರಾವಳಿ ಫ್ರೆಂಡ್ಸ್ ಮಸ್ಕತ್ ಅವರು ಕಾರ್ಯಕ್ರಮ ಕ್ಕೆ ಪ್ರೋತ್ಸಾಹ ಮತ್ತು ಬೆಂಬಲನೀಡಿದ ಪ್ರಾಯೋಜಕರಿಗೆ, ಅದ್ಭುತವಾಗಿ ನಟಿಸಿ ರಂಜಿಸಿದ ಕಲಾವಿದರಿಗೆ, ನಾಟಕದ ಪ್ರತಿ ಸನ್ನಿವೇಶವನ್ನು ಮನಸ್ಪೂರ್ತಿ ಆಹ್ಲಾದಿಸಿದ ಪ್ರೇಕ್ಷಕರಿಗೆ ಹಾಗೂ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಎಲ್ಲಾ ಸ್ವಯಂ ಸೇವಕರಿಗೆ, ಆತ್ಮೀಯರಿಗೆ ಹೀಗೆ ಪ್ರತಿಯೊಬ್ಬರಿಗೂ ತಮ್ಮ ಹೃತ್ಪೂರ್ವಕವಾದ ಧನ್ಯವಾದಗಳನ್ನು ಅರ್ಪಿಸಿದರು.

Related Articles

Back to top button
error: Content is protected !!