ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ,ಮೂವರು ಸೆರೆ
Views: 223
ಕನ್ನಡ ಕರಾವಳಿ ಸುದ್ದಿ: ನಗರದ ಗಂಗೊಡನಹಳ್ಳಿ ಪ್ರದೇಶದಲ್ಲಿ ಪಶ್ಚಿಮ ಬಂಗಾಳದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮನೆಯ ಮೇಲೆ ದಾಳಿ ಮಾಡಿದ ಐದು ಮಂದಿ ಬಾಗಿಲು ತೆರೆಯುವಂತೆ ಬಲವಂತಪಡಿಸಿದರು. ಆಗ ಮನೆಯಲ್ಲಿ ಆರು ಮಂದಿ ಇದ್ದರು. ಮಧ್ಯರಾತ್ರಿ 12.30ರ ವೇಳೆಗೆ ಸಂತ್ರಸ್ತೆಯ ಹಿರಿಯ ಮಗ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದರು.
ಆರೋಪಿಗಳು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಮನೆಯಲ್ಲಿದ್ದ ಎರಡು ಮೊಬೈಲ್ ಮತ್ತು 25 ಸಾವಿರ ರೂಪಾಯಿ ನಗದು ದರೋಡೆ ಮಾಡಿದ್ದಾರೆ ಎಂದು ಬೆಂಗಳೂರು ಗ್ರಾಮೀಣ ಎಸ್ಪಿ ಸಿ.ಕೆ.ಬಾಬಾ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮಹಿಳೆ ಇತರ ಇಬ್ಬರ ಹೆಣ್ಣುಮಕ್ಕಳು, ಇಬ್ಬರು ವಯಸ್ಕರು ಹಾಗೂ ಇಬ್ಬರು ಮಕ್ಕಳ ಜತೆ ವಾಸವಿದ್ದರು ಎಂದು ವಿವರಿಸಿದ್ದಾರೆ.
ಕಾರ್ತಿಕ್, ಗ್ಲೆನ್ ಮತ್ತು ಸುಯೋಗ್ ಎಂಬವರು ಬಂಧಿತ ಆರೋಪಿಗಳು. ಇತರ ಇಬ್ಬರು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳು ಅದೇ ಪ್ರದೇಶದವರೆಂದು ಗುರುತಿಸಲಾಗಿದೆ. ಸಂತ್ರಸ್ತೆ ಅಪಾಯದಿಂದ ಪಾರಾಗಿದ್ದು, ಆರೋಪಿಗಳು, ಸಂತ್ರಸ್ತೆಗೆ ಪರಿಚಿತರೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಕರಣದ ತನಿಖೆಗಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ಆರೋಪಿಗಳ ಸಾಮೂಹಿಕ ಅತ್ಯಾಚಾರ ಮತ್ತು ದರೋಡೆ ಪ್ರಕರಣ ದಾಖಲಿಸಲಾಗಿದೆ.






