ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡ 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಉಪನ್ಯಾಸಕಿ ಸಾವು

Views: 119
ಕನ್ನಡ ಕರಾವಳಿ ಸುದ್ದಿ: 2010ರ ಜುಲೈ 30ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡು 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಕಳಿಯ ಗ್ರಾಮದ ಉಬರಡ್ಕ ನಿವಾಸಿ ದಿ. ಕುಂರ್ಬಿಲ ಹಾಗೂ ಲಕ್ಷ್ಮೀ ದಂಪತಿ ಪುತ್ರಿ ಭಾರತಿ (41) ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೇಲಂತಬೆಟ್ಟು ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದ ಅವರು ಅಪಘಾತದ ಬಳಿಕ ಸೊಂಟದ ಸ್ವಾಧೀನ ಕಳೆದುಕೊಂಡು ಮಲಗಿದ್ದಲ್ಲೇ 14 ವರ್ಷ ನರಕಯಾತನೆ ಅನುಭವಿಸಿದ್ದರು. ಕಳೆದ ಕೆಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.
ಘಟನೆಯ ಹಿನ್ನೆಲೆ:
2010ರ ಜುಲೈ 30ರಂದು ಭಾರೀ ಮಳೆ ಸುರಿಯುತ್ತಿದ್ದ ವೇಳೆ ಮೇಲಂತಬೆಟ್ಟು ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕಿಯರಾದ ಭಾರತಿ ಹಾಗೂ ಜಯಮಾಲಾ ಕಾಲೇಜು ಬಿಟ್ಟು ಆಟೋದಲ್ಲಿ ಬರುತ್ತಿದ್ದ ಸಂದರ್ಭ ಮೂಡಿಗೆರೆ ಕಡೆಯಿಂದ ಬರುತ್ತಿದ್ದ ಪಿಕಪ್ ಸಂತೆಕಟ್ಟೆ ಅಯ್ಯಪ್ಪ ಮಂದಿರದ ಬಳಿ ಢಿಕ್ಕಿಯಾಗಿತ್ತು. ಈ ವೇಳೆ ಶಿಕ್ಷಕಿ ಜಯಮಾಲಾ ಸ್ಥಳದಲ್ಲೇ ಮೃತಪಟ್ಟಿದ್ದು ಭಾರತಿ ಗಂಭೀರವಾಗಿ ಗಾಯಗೊಂಡಿದ್ದರು.
ಜಯಮಾಲಾ ಅವರು ಕೆ.ಎ.ಎಸ್. ಪರೀಕ್ಷೆ ಬರೆದಿದ್ದು ಮರಣೋತ್ತರವಾಗಿ ಬಂದ ಫಲಿತಾಂಶದಲ್ಲಿ ಉತ್ತೀರ್ಣರಾಗಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೆಲವು ಸಮಯ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆದು ಬಳಿಕ ಮನೆಗೆ ಬಂದಿದ್ದ ಶಿಕ್ಷಕಿ ಭಾರತಿ ಅವರು ಸೊಂಟದ ಸ್ವಾಧೀನ ಕಳೆದುಕೊಂಡ ಪರಿಣಾಮ ಮಲಗಿದ್ದಲ್ಲೆ ಇದ್ದರು. 14 ವರ್ಷ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಂದ ಎಲ್ಲ ನೋವು, ಸವಾಲುಗಳನ್ನು ಎದುರಿಸಿದ್ದರು.






