ಇತರೆ

ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಸಾವು

Views: 72

ಕನ್ನಡ ಕರಾವಳಿ ಸುದ್ದಿ: ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ ಭಾಲ್ಕಿ ತಾಲೂಕಿನ ನೀಲಂನಹಳ್ಳಿ ತಾಂಡಾ ಹತ್ತಿರದ ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಬುಧವಾರ ನಡೆದಿದೆ.

ನೆರೆಯ ತೆಲಂಗಾಣದ ನಾರಾಯಣಖೇಡ್ ತಾಲೂಕಿನ ಜಗನ್ನಾಥಪುರದ ರಾಚಪ್ಪ ರಾಮಚಂದ್ರಪ್ಪ ಬಿರಾದಾರ್ (51), ಚಾಲಕ ನವನಾಥ ಶರಣಪ್ಪ (25), ಯಲ್ಲವಾಯಿ ಗ್ರಾಮದ ನಾಗರಾಜು ಇಸ್ಟಯ್ಯಾ (38) ಸ್ಥಳದಲ್ಲಿಯೇ ಮೃತಪಟ್ಟರೆ, ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ಜಗನ್ನಾಥಪುರಿಯ ಕಾಶಿನಾಥ ರಾಮಶೆಟ್ಟಿ (62) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಪ್ರತಾಪ್ ಮಾಣಿಕರಾವ ಬಿರಾದಾರ (38) ಎಂಬುವರ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಚಿಕಿತ್ಸೆಯನ್ನು ಮುಂದುವರೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾರಿನಲ್ಲಿ ತೆಲಂಗಾಣದ ಜಗನ್ನಾಥಪುರಿ ಗ್ರಾಮದಿಂದ ಐವರು ಮಂಗಳವಾರ ಕಲಬುರಗಿ ಜಿಲ್ಲೆಯ ದೇವಲಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಮರಳಿ ಸ್ವಗ್ರಾಮಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಎದುರಿನಿಂದ ಬಂದ ಗೂಡ್ಸ್ ವಾಹನ ಡಿಕ್ಕಿಯಾಗಿ ಘಟನೆ ನಡೆದಿದೆ.

ತಕ್ಷಣ ಧನ್ನೂರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ಜೆಸಿಬಿ ಯಂತ್ರದಿಂದ ಅಪಘಾತಕ್ಕೀಡಾದ ಎರಡು ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಧನ್ನೂರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

Related Articles

Back to top button
error: Content is protected !!