ಬಾರ್ಕೂರಿನಲ್ಲಿ ಸುಜ್ಞಾನ ವಿದ್ಯಾರ್ಥಿ ವೇತನ ಪರೀಕ್ಷೆ ಉದ್ಘಾಟನೆ
Views: 14
ಕನ್ನಡ ಕರಾವಳಿ ಸುದ್ದಿ: ಸುಜ್ಞಾನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಇದಾಗಿದ್ದು, ಕನ್ನಡ ಮಾಧ್ಯಮದಲ್ಲಿ ಓದಿದವರು ಕೀಳು, ಇಂಗ್ಲೀಷ್ ಮಾಧ್ಯಮದಲ್ಲಿ ಓದಿದವರು ಮೇಲೆ ಎಂಬುದು ಮುಖ್ಯವಲ್ಲ ನಿಮ್ಮ ಭವಿಷ್ಯದ ಬಗ್ಗೆ ನೀವೇ ಜವಾಬ್ದಾರರು. ನೀವು ದೊಡ್ಡ ಸಾಧನೆ ಮಾಡಿದಾಗ ಕಾರಣೀ ಕರ್ತರನ್ನು ನೆನಪಿಸಿಕೊಂಡು ನಿಮ್ಮನ್ನು ಮೇಲಕ್ಕೆ ಕೊಂಡು ಹೋದ ಶಿಕ್ಷಣ ಸಂಸ್ಥೆಯನ್ನು ನೆನಪಿಸಿಕೊಳ್ಳಿ ಈ ನಿಟ್ಟಿನಲ್ಲಿ ಸುಜ್ಞಾನ ಶಿಕ್ಷಣ ಸಂಸ್ಥೆಯ ಮಹತ್ತರ ಸಾಧನೆ ಬಗ್ಗೆ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಶ್ಲಾಘಿಸಿದರು.
ಬಾರ್ಕೂರು ಎಜುಕೇಶನ್ ಸೊಸೈಟಿ ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್ (ರಿ.) ಇವುಗಳ ಜಂಟಿ ಆಶ್ರಯದಲ್ಲಿ ಬಾರ್ಕೂರಿನ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ “ವಿದ್ಯಾರ್ಥಿ ವೇತನ ಪರೀಕ್ಷೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಬ್ರಹ್ಮಾವರ ಪಿಎಸ್ಐ ಅಶೋಕ್ ಅವರು ತಮ್ಮ ವಿದ್ಯಾರ್ಥಿ ಜೀವನದ ಹೋರಾಟವನ್ನು ಹಂಚಿಕೊಳ್ಳುತ್ತಾ, ಸೋಲು ಎಂಬುದು ಅಂತ್ಯವಲ್ಲ, ಅದು ಯಶಸ್ಸಿನ ಹಾದಿಯ ಪಾಠ ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
ನಿವೃತ್ತ ಪ್ರಾಂಶುಪಾಲ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, 70 ವರ್ಷಗಳ ನಿರಂತರ ಬದುಕನ್ನು ಸಾರ್ಥಕ ಸಾಧನೆಯಿಂದ 20ರ ಯುವಕನಂತೆ ಹಸನಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾರ್ಕೂರು ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಶ್ರೀ ಶಾಂತರಾಮ್ ಶೆಟ್ಟಿ ಅವರು ಮಾತನಾಡಿ, “80 ವರ್ಷಗಳ ಇತಿಹಾಸವಿರುವ ಈ ಸಂಸ್ಥೆಯನ್ನು ಉಳಿಸಿ ಬೆಳೆಸಲು ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನೊಂದಿಗೆ ಆಡಳಿತಾತ್ಮಕ ಒಪ್ಪಂದ ಮಾಡಿಕೊಳ್ಳಲಾಗಿದೆಯೇ ಹೊರತು ಸಂಸ್ಥೆಯನ್ನು ಮಾರಾಟ ಮಾಡಿಲ್ಲ. ದಕ್ಷ ಆಡಳಿತಕ್ಕೆ ಹೆಸರಾದ ಸುಜ್ಞಾನ ಸಂಸ್ಥೆಯು ಈ ಭಾಗದ ಶೈಕ್ಷಣಿಕ ಚಿತ್ರಣವನ್ನೇ ಬದಲಿಸಲಿದೆ ಎಂದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಡಾ. ರಮೇಶ್ ಶೆಟ್ಟಿ ಅವರ 30 ವರ್ಷಗಳ ಶೈಕ್ಷಣಿಕ ಅನುಭವದಡಿ ಈ ಸಂಸ್ಥೆಯು ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಬೆಳೆಯಲಿದೆ ಎಂದರು.
ಟ್ರಸ್ಟ್‌ನ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ನೀಡುವುದು ಸುಜ್ಞಾನ ಸಂಸ್ಥೆಯ ಮುಖ್ಯ ಗುರಿಯಾಗಿದೆ. ಸರ್ಕಾರಿ ಶಾಲೆಯಲ್ಲಿ ಓದಿದರೂ ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆ ಸೇರಬಹುದು ಎಂಬುದಕ್ಕೆ ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಾಧನೆಯೇ ಸಾಕ್ಷಿ. ಇದು ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದರು. ಅಲ್ಲದೆ ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿನ ಸಾಧನೆಯ ಆಧಾರದ ಮೇಲೆ ಅರ್ಹ ವಿದ್ಯಾರ್ಥಿಗಳಿಗೆ ಶೇ. 50ರಿಂದ ಶೇ. 100ರವರೆಗೆ ಶುಲ್ಕ ರಿಯಾಯಿತಿ ನೀಡಲಾಗುವುದು. ವಿಶೇಷವಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಹಾಗೂ ಜೆಇಇ ತರಬೇತಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ವಿದ್ಯಾರ್ಥಿಗಳಿಗೆ ದೆಹಲಿಯಿಂದ ತರಿಸಲಾದ ಅತ್ಯುನ್ನತ ಗುಣಮಟ್ಟದ ಎನ್‌ಸಿಇಆರ್‌ಟಿ ಆಧಾರಿತ ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಶಿಕ್ಷಣವು ಕೇವಲ ನಗರ ಪ್ರದೇಶದ ಶ್ರೀಮಂತರಿಗೆ ಸೀಮಿತವಾಗಬಾರದು ಎಂಬುದು ನಮ್ಮ ಆಶಯ ಎಂದರಲ್ಲದೆ ಖಾಸಗಿ ಕಾಲೇಜುಗಳ ಅಧಿಕ ಶುಲ್ಕದ ಬಗ್ಗೆ ಪೋಷಕರಲ್ಲಿರುವ ಆತಂಕ ಬೇಡ. ಬಾರ್ಕೂರು ಎಜುಕೇಶನ್ ಸೊಸೈಟಿಯ ಆಶಯದಂತೆ ಕನಿಷ್ಠ ವೆಚ್ಚದಲ್ಲಿ ವಿಶ್ವದರ್ಜೆಯ ಶಿಕ್ಷಣ ನೀಡುವುದು ನಮ್ಮ ಬದ್ಧತೆಯಾಗಿದೆ ಎಂದು ಭರತ್ ಶೆಟ್ಟಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ, ಸಂಚಾಲಕ ರಾಜ್‌ಗೋಪಾಲ ನಂಬಿಯಾರ್, ಆಡಳಿತಾಧಿಕಾರಿ ಕೃಷ್ಣ ಹೆಬ್ಬಾರ್ ಉಪಸ್ಥಿತರಿದ್ದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಾರ್ಕೂರು ಎಜ್ಯುಕೇಶನ್ ಟ್ರಸ್ಟ್ ಅತ್ಯಂತ ಸಮಾಜಮುಖಿ ಕಾರ್ಯಕ್ರಮಗಳನ್ನು ನಾವು ಸಮರ್ಥವಾಗಿ ಮುನ್ನೆಡಿಸಿಕೊಂಡು ಹೋಗಲು ನಿಮ್ಮೆಲ್ಲರ ಪ್ರೋತ್ಸಾಹ ಅತ್ಯಗತ್ಯ ಎಂದರು.
ಸಭಾ ಕಾರ್ಯಕ್ರಮದ ನಂತರ ನಡೆದ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಈ ಸಂದರ್ಭ ಬಾರಕೂರು ಎಜುಕೇಶನಲ್ ಸೊಸೈಟಿಯ ಉಪಾಧ್ಯಕ್ಷ ಶೇಡಿಕೊಡ್ಲು ವಿಟ್ಟಲ ಶೆಟ್ಟಿ ಎಸ್.ವಿ.ವಿ.ಎನ್. ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರಾಜಾರಾಮ ಶೆಟ್ಟಿ ಆಡಳಿತ ಮಂಡಳಿಯ ಸದಸ್ಯರಾದ ಎಸ್. ಜಯರಾಮ ಶೆಟ್ಟಿ ನ್ಯಾಶನಲ್ ಐಟಿಐ ಸಂಚಾಲಕ ಬಿ. ರಾಮಚಂದ್ರ ಕಾಮತ್, ನ್ಯಾಶನಲ್ ಪ.ಪೂ. ಕಾಲೇಜಿನ ಸಂಚಾಲಕ ರಾಜ್ ಗೊಪಾಲ ನಂಬಿಯಾರ್,ಬಾರಕೂರು ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಉಪನ್ಯಾಸಕ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.













