ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗಿನಿಂದ 114 ಗ್ರಾಂ ತೂಕದ ಚಿನ್ನಾಭರಣ ಎಗರಿಸಿದ ಮಹಿಳೆ ಅರೆಸ್ಟ್
Views: 56
ಕನ್ನಡ ಕರಾವಳಿ ಸುದ್ದಿ: ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಮಹಿಳೆಯೋರ್ವರ ಬ್ಯಾಗಿನಿಂದ 114 ಗ್ರಾಂ ತೂಕದ ಚಿನ್ನಾಭರಣದ ಬಾಕ್ಸ್ ಎಗರಿಸಿದ್ದ ಪ್ರಕರಣವನ್ನು ಭೇದಿಸಿದ ಉಪ್ಪಿನಂಗಡಿ ಪೊಲೀಸರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ತಾಲೂಕು ಕೊಮಿನಡ್ಕ ನಿವಾಸಿ ನಸೀಮಾ (31) ಬಂಧಿತ ಆರೋಪಿ. ಕಳವುಗೈದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಕಡಬ ತಾಲೂಕು ಬಂಟ್ರ ಗ್ರಾಮದ ನೆಕ್ಕಿತ್ತಡ್ಕ ನಿವಾಸಿ ಮುಸ್ತಫಾ ಅವರ ಪತ್ನಿ ಅಬೀಬಾ ಅವರು ಭಾವನ ಪತ್ನಿ ಹಸೀರಾಬಾನು ಜತೆಗೆ ಜ. 6ರಂದು ಮದುವೆ ಕಾರ್ಯಕ್ರಮಕ್ಕೆ ಹೊರಡುವ ಮೊದಲು ಮನೆಯಲ್ಲಿದ್ದ ಅವರ ಸುಮಾರು 8 ಗ್ರಾಂ ತೂಕದ ಚಿನ್ನದ ನೆಕ್ಲೇಸ್ -1 ಮತ್ತು ಹಸೀರಾಬಾನುರವರ ಸುಮಾರು 106 ಗ್ರಾಂ ತೂಕದ ಚಿನ್ನಾಭರಣವನ್ನು ಒಂದು ಬಾಕ್ಸ್ ನೊಳಗಡೆ ಹಾಕಿ ವ್ಯಾನಿಟಿ ಬ್ಯಾಗಿನೊಳಗಡೆ ಇಟ್ಟುಕೊಂಡಿದ್ದರು. ಮದುವೆ ಮುಗಿಸಿ ಮನೆಗೆ ಬರುತ್ತಿದ್ದಾಗ ಬಸ್ಸಿನಲ್ಲಿ ಇವರ ಬ್ಯಾಗಿನ ಜಿಪ್ ತೆರೆದಿರುವುದು ಕಂಡು ಬಂದಿತ್ತು. ಪರಿಶೀಲಿಸಿದಾಗ ಅದರಲ್ಲಿದ್ದ ಚಿನ್ನದ ಬಾಕ್ಸ್ ಕಳವಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು ತನಿಖೆ ನಡೆಸಿದ ಪೊಲೀಸರು, ಬ್ಯಾಗ್ ಕಳವು ಮಾಡುವುದರಲ್ಲಿ ಕುಖ್ಯಾತಿ ಗಳಿಸಿದ್ದ ನಸೀಮಾಳನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದಾಗ ಕಳವು ನಡೆಸಿರುವುದನ್ನು ಒಪ್ಪಿಕೊಂಡಿದ್ದಾಳೆ.