ನರೇಂದ್ರ ಮೋದಿ ಸಮ್ಮಿಶ್ರ ಸರಕಾರ: 71ಸಚಿವರಲ್ಲಿ 30 ಕ್ಯಾಬಿನೆಟ್,5 ಸ್ವತಂತ್ರ ಖಾತೆ, 36 ರಾಜ್ಯ ಖಾತೆಯ ಸಚಿವರು ಪ್ರಮಾಣವಚನ

Views: 95
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮತ್ತು ಕೇಂದ್ರ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ನರೇಂದ್ರ ಮೋದಿ ಸತತವಾಗಿ ಮೂರನೇ ಬಾರಿಗೆ ಪ್ರಧಾನಿಯಾಗಿ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಿದರು. 24 ರಾಜ್ಯಗಳ 71 ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದರಲ್ಲಿ 30 ಕ್ಯಾಬಿನೆಟ್ ಸಚಿವರು, ಐವರು ರಾಜ್ಯ ಖಾತೆ (ಸ್ವತಂತ್ರ ನಿರ್ವಹಣೆ) ಮತ್ತು 36 ರಾಜ್ಯ ಖಾತೆಯ ಸಚಿವರು ಸೇರಿದ್ದಾರೆ.
ಎನ್ ಡಿಎ ಮೈತ್ರಿಕೂಟ ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರಿದ್ದು ಭಾನುವಾರ ಸಂಜೆ ಪ್ರಧಾನ ಮಂತ್ರಿಯಾಗಿ ಸತತ ಮೂರನೇ ಅವಧಿಗೆ ನರೇಂದ್ರ ದಾಮೋದರ ದಾಸ್ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿಗಳುು ಪ್ರಮಾಣವಚನ ಬೋಧಿಸಿದಿರು. ನರೇಂದ್ರ ಮೋದಿ ಅವರ ಜತೆಗೆ ಹಲವು ಸಂಸದರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶದಲ್ಲಿ 10 ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ.
ಟಿಡಿಪಿ, ಜೆಡಿಯು, ಜೆಡಿಎಸ್ ಹಾಗೂ ಎಲ್ಜೆಪಿ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಸತತ ಮೂರು ಅವಧಿಗೆ ಆಯ್ಕೆಯಾದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಸ್ವಾತಂತ್ರ್ಯದ ನಂತರದ ದೇಶದ ಮೊದಲ ನಾಯಕ ಜವಾಹರಲಾಲ್ ನೆಹರು ಅವರು ಬ್ರಿಟನ್ನಿಂದ 1947 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ 17 ವರ್ಷಗಳ ಕಾಲ ಭಾರತವನ್ನು ಆಳಿದ್ದರು.
ಬಿಜೆಪಿ ಹಿರಿಯ ಸಂಸದ ಅಮಿತ್ ಶಾ ಅವರು ಸಹ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಮೋದಿ ಸಂಪುಟದ ಕ್ಯಾಬಿನೆಟ್ ಸಚಿವರಾಗಿ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಅಚ್ಚರಿ ಎಂಬಂತೆ ಮೋದಿ ಸಂಪುಟ ಸೇರಿದ್ದಾರೆ.
ಮಧ್ಯ ಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಡಾ ಎಸ್ ಜೈಶಂಕರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಹೆಚ್ ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹರ್ಯಾಣದ ಮಾಜಿ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರು ಕ್ಯಾಬಿನೆಟ್ ಸಚಿವರಾಗಿ ಮೋದಿ ಸರ್ಕಾರಕ್ಕೆ ಸೇರ್ಪಡೆಯಾದರು. ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಹಿಂದೂಸ್ತಾನ್ ಅವಾಮಿ ಮೋರ್ಚಾ ಪಕ್ಷದ ನಾಯಕ ಜಿತನ್ ರಾಮ್ ಮಾಂಝಿ, ಬಿಹಾರದ ಜೆಡಿಯು ಸಂಸದ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಅವರು ನಿತೀಶ್ ಕುಮಾರ್ ಅವರ ಜೆಡಿಯು ಕೋಟಾದಿಂದ ಮೋದಿ ಸಂಪುಟಕ್ಕೆ ಸೇರ್ಪಡೆಯಾದರು.
ಅಸ್ಸಾಂನ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭೆ ಸಂಸದ ಸರ್ಬಾನಂದ್ ಸೊನೊವಾಲ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿದ್ದ ಮಧ್ಯಪ್ರದೇಶದ ಬಿಜೆಪಿ ಸಂಸದ ಡಾ ವಿರೇಂದ್ರ ಕುಮಾರ್ ಖಾಟಿಕ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.
ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಸಂಸದ ಕಿಂಜರಪು ರಾಮ್ ಮೋಹನ್ ನಾಯ್ಡು ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶ್ರೀಕಾಕುಳಂ ಕ್ಷೇತ್ರದ ಸಂಸದರಾಗಿರುವ ನಾಯ್ಡು, 36ನೇ ವಯಸ್ಸಿನಲ್ಲಿಯೇ ಕೇಂದ್ರ ಸಚಿವರಾಗುವ ಅವಕಾಶ ಪಡೆದಿದ್ದಾರೆ.







