ಸಾಂಸ್ಕೃತಿಕ

ನಟ ದರ್ಶನ್ ಜಾಮೀನು ಅರ್ಜಿ ತಿದ್ದುಪಡಿ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್: 1 ವರ್ಷ ಜೈಲೇ ಗತಿ!

Views: 37

ಕನ್ನಡ ಕರಾವಳಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ಗೆ ಮತ್ತೊಂದು ಆಘಾತ ಎದುರಾಗಿದೆ.

ಇನ್ನೂ ಒಂದು ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂಬ ಆದೇಶವನ್ನು ಮರುಪರಿಶೀಲನೆ ಮಾಡಬೇಕೆಂದು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಜಾಮೀನು ಮತ್ತು ತನಿಖಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿದ್ದ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ನೋಂದಣಾಧಿಕಾರಿಯೇ ವಜಾ ಮಾಡಿದ್ದಾರೆ. ನ್ಯಾಯಮೂರ್ತಿಗಳ ಪೀಠಕ್ಕೆ ಹೋಗುವ ಮುನ್ನವೇ ಅರ್ಜಿ ವಜಾ ಆಗಿದೆ.

ಒಂದು ವರ್ಷದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ಮರು ಪರಿಶೀಲನೆ ಮಾಡುವಂತೆ ದರ್ಶನ್ ಪರ ವಕೀಲರು ಮತ್ತೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಈ ನಿರ್ಧಾರದಿಂದಾಗಿ ಕಾನೂನು ಹೋರಾಟದಲ್ಲಿ ನಟ ದರ್ಶನ್‌ಗೆ ಮತ್ತೆ ತೀವ್ರ ಹಿನ್ನಡೆಯಾಗಿದೆ.

ಸಾಕ್ಷ್ಯನಾಶಕ್ಕೆ ಯತ್ನಿಸಿದವರ ಮೊಬೈಲ್‌ ಎಫ್‌ಎಸ್‌ಎಲ್‌ಗೆ

ದರ್ಶನ್ ಅಭಿಮಾನಿಗಳೆನ್ನಲಾದ ಮೂವರು ಸಾಕ್ಷಿದಾರ ಸಂದೀಪ್ ಎಂಬುವವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಬಂಧಿತರ ಪೈಕಿ ಒಬ್ಬಾತ ಸಾಕ್ಷಿ ಸಂದೀಪ್‌ ಗೆ ವಾಟ್ಸಾಪ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಸುಳ್ಳು ಸಾಕ್ಷಿ ಹೇಳಲು ಒತ್ತಾಯಿಸಿದ್ದಾರೆ. ಒಂದು ವೇಳೆ ಸುಳ್ಳು ಸಾಕ್ಷಿ ಹೇಳಿದರೆ ಎಲ್ಲ ರೀತಿಯ ನೆರವು ನೀಡುವುದಾಗಿ ಆಮಿಷವೊಡ್ಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಂಧಿತರಿಂದ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವನ್ನು ಎಫ್‌ಎಸ್ಎಲ್‌ ಪರೀಕ್ಷೆಗೆ ಒಯ್ಯಲಾಗಿದೆ.

Related Articles

Back to top button
error: Content is protected !!