ಜ್ಞಾನಸರಸ್ವತಿ ಕಾಲೇಜು :ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾನ್ವೇಷಣೆ
Views: 386
ಕನ್ನಡ ಕರಾವಳಿ ಸುದ್ದಿ: ಸಿದ್ದಾಪುರದ ಜ್ಞಾನಸರಸ್ವತಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾನ್ವೇಷಣೆ 2025-26 ಕಾರ್ಯಕ್ರಮ ಜರುಗಿತು.
ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಿ, ಡಾI ಬಿ.ಬಿ ಹೆಗ್ಡೆ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾI ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾಷೆಯಾಗಿ ಕನ್ನಡ ಎದುರಿಸಿದ, ಎದುರಿಸುತ್ತಿರುವ, ಎದುರಿಸಬೇಕಾದ ಸವಾಲುಗಳಿಗೆ ಉತ್ತರವಾಗಬೇಕಾದ,ಮತ್ತು ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಳ್ಳ ಬೇಕಾದ ಜವಬ್ದಾರಿ ನಮ್ಮ ಮೇಲಿದೆ ಎಂಬುದನ್ನು ತಿಳಿಸಿ, ಕಾಲೇಜಿನ ಪ್ರಥಮ ಸಂಭ್ರಮಾಚರಣೆಯ ಆಯೋಜನೆಯ ಜೊತೆಗೆ ಉತ್ತಮ ಉಪನ್ಯಾಸಕ ಬಳಗ ಹಾಗೂ ಸಮಗ್ರ ಶಿಕ್ಷಣಕ್ಕೆ ಒತ್ತು ನೀಡುವ ಆಡಳಿತ ಮಂಡಳಿಯನ್ನು ಹೊಂದಿರುವ ಈ ವಿದ್ಯಾಸಂಸ್ಥೆ ರಾಜ್ಯ, ರಾಷ್ಟ್ರ ವ್ಯಾಪಿ ಸಂಚಲನ ಮೂಡಿಸುವಲ್ಲಿ ಅನುಮಾನವಿಲ್ಲ ಎಂಬುದಾಗಿ ಶ್ಲಾಘಿಸಿದರು.
ರಂಗಭೂಮಿ ಕಲಾವಿದರಾದ ಪ್ರಸಾದ್ ಜೋಗಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಕುಂದಗನ್ನಡ ಕನ್ನಡವನ್ನು ಉಳಿಸುತ್ತಿದೆ ಬೆಳೆಸುತ್ತಿದೆ ಎಂಬುದನ್ನು ಕೆಲವು ಹಾಸ್ಯ ಸನ್ನಿವೇಶಗಳ ಜೊತೆಜೊತೆಗೆ ಗಂಭೀರ ವಿಚಾರಗಳನ್ನು ಮನಮುಟ್ಟುವಂತೆ ತಿಳಿಸಿ, ಗ್ರಾಮೀಣ ಪರಿಸರದಲ್ಲಿ ಬೆಳೆದು ನಿಂತಿರುವ ಕಾಲೇಜು ಯಾವ ಪ್ರತಿಷ್ಠಿತ ವಿದ್ಯಾಸಂಸ್ಥೆ ಗೂ ಕಡಿಮೆಯಿಲ್ಲ ಎಂಬುದಾಗಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಸುಮುಖ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಎಸ್ ಸುರೇಶ್ ಶೆಟ್ಟಿ ಯವರು ಕನ್ನಡ ಕೇವಲ ಭಾಷೆಯಲ್ಲ ಅದೊಂದು ಬದುಕಿನ ವಿಧಾನ, ನಮ್ಮ ನಡೆ ನುಡಿಯ ಮೇಲೆ ನಮ್ಮ ಆಚಾರ,ವಿಚಾರ, ಸಂಸ್ಕೃತಿ ಅನಾವರಣಗೊಳ್ಳುತ್ತದೆ ಹಾಗಾಗಿ ಕನ್ನಡದ ಉಳಿವಿಗೆ ಸದಾ ಒಗ್ಗಟ್ಟಾಗಿ ಶ್ರಮಿಸೊಣ ಎಂದು ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು.
ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲರವ ಕಾರ್ಯಕ್ರಮದ ಮೆರುಗನ್ನು ಇಮ್ಮಡಿ ಗೊಳಿಸಿತು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಅಮರೇಶ್ ಹೆಗ್ಡೆ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪ ಪ್ರಾಂಶುಪಾಲರಾದ ಹರ್ಷ ಶೆಟ್ಟಿ ವಂದಿಸಿದರು.ಸರಸ್ವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಗಣೇಶ್ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕರಾದ ನಾಗರಾಜ್ ಗುಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.ನಂತರ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ 2025-26 ನಡೆಸಲಾಯಿತು. ತೀರ್ಪುಗಾರರಾಗಿ ಸರಕಾರಿ ಪ್ರೌಢಶಾಲೆ ಸಿದ್ದಾಪುರದ ಚಿತ್ರಕಲಾ ಶಿಕ್ಷಕರಾದ ರಾಘವೇಂದ್ರ ಛಾತ್ರಮಕ್ಕಿ, ನಿವೇದಿತಾ ಪ್ರೌಢಶಾಲೆ ಬಸ್ರೂರಿನ ಶಿಕ್ಷಕರಾದ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾರ್ಡಿಯ ಮುಖ್ಯ ಶಿಕ್ಷಕರಾದ ಗಣೇಶ್ ಆಗಮಿಸಿದ್ದರು. ಅವರನ್ನು ಗುರುತಿಸಿ ಗೌರವಿಸಲಾಯಿತು. ಕಾಲೇಜಿನ ಪ್ರತಿಭೆಗಳನ್ನು ಗುರುತಿಸಿ ಬಹುಮಾನವನ್ನು ವಿತರಿಸಿದ ಅವರು ಕಾಲೇಜು ಪ್ರಥಮ ವರ್ಷದಲ್ಲೇ ಈ ರೀತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಪ್ರತಿಭಾನ್ವಿತ ಉಪನ್ಯಾಸಕರನ್ನು ಹೊಂದಿರುವುದು ಈ ವಿದ್ಯಾಸಂಸ್ಥೆ ಯ ಹೆಮ್ಮೆ ಎಂಬುದನ್ನು ಗುರುತಿಸಿ ಶ್ಲಾಘಿಸಿದರು.
ಕಾಲೇಜಿನ ವಿಜ್ಞಾನ ವಿಭಾಗದ ಪಿ.ಸಿ.ಎಂ.ಬಿ*ತಂಡ ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಸರಸ್ವತಿ ವಿದ್ಯಾಲಯ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಂಗ್ಲ ಭಾಷಾ ಉಪನ್ಯಾಸಕರಾದ ಮಂಜುನಾಥ್ ಸಿ.ಪಿ,ಕನ್ನಡ ಉಪನ್ಯಾಸಕರಾದ ನಾಗರಾಜ್ ಗುಳ್ಳಾಡಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.






