ಕೊಡಗಿನ ಕಾಡಿನಲ್ಲಿ ದಾರಿ ತಪ್ಪಿದ ಶರಣ್ಯ 3 ರಾತ್ರಿ, 4 ಹಗಲು ಕಳೆದ “ಕಾಡಿನ ನಿಗೂಢ ಕಥೆ” ಏನು?
Views: 161
ಕನ್ನಡ ಕರಾವಳಿ ಸುದ್ದಿ: ಕೊಡಗಿನ ಕಾಡಿನಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಶರಣ್ಯ ಎಂಬ ಯುವತಿ ಭಾನುವಾರ ಪತ್ತೆಯಾಗಿದ್ದಾರೆ.
ಕಾರ್ಯಾಚರಣೆಯ ಅಂತ್ಯವಂತೂ ಸುಖಾಂತ್ಯ ಕಂಡಿದೆ. ಆದರೆ, ಈ ಪ್ರಕರಣ ಈಗ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 3 ರಾತ್ರಿ, 4 ಹಗಲು ಕಾಡಿನಲ್ಲಿದ್ದರೂ ಶರಣ್ಯ ಮೇಲೆ ಯಾವುದೇ ಗಾಯಗಳಿಲ್ಲ, ಆಕೆಗೆ ಸುಸ್ತೂ ಆಗಿಲ್ಲ. ಇಷ್ಟಕ್ಕೂ ಆ ದಿನಗಳಲ್ಲಿ ನಡೆದಿದ್ದಾದರೂ ಏನು?

ಅನುಮಾನದ ಹುತ್ತವಾಗಿ ಶರಣ್ಯ ಪ್ರಕರಣ
ಗುರುವಾರ ಮಧ್ಯಾಹ್ನ ಟ್ರೆಕ್ಕಿಂಗ್ ವೇಳೆ ನಾಪತ್ತೆಯಾಗಿದ್ದ ಶರಣ್ಯ, ಭಾನುವಾರ ಸಂಜೆ ಕಾಣಿಸಿಕೊಂಡಾಗ ಅವರ ಮುಖದಲ್ಲಿ ಕಳೆದುಹೋಗಿದ್ದೆ ಎಂಬ ಕನಿಷ್ಠ ಭಯವಾಗಲಿ ಅಥವಾ ಆತಂಕವಾಗಲಿ ಇರಲಿಲ್ಲ. ಈ ಪ್ರಕರಣದ ಸುತ್ತ ಸಾರ್ವಜನಿಕರಲ್ಲಿ ಮತ್ತು ಸ್ಥಳೀಯರಲ್ಲಿ ಮೂಡಿರುವ ಪ್ರಮುಖ ಅನುಮಾನಗಳು ಇಲ್ಲಿವೆ.
ಗುರುವಾರದಿಂದ ಭಾನುವಾರದವರೆಗೆ ಅಂದರೆ ಸುಮಾರು 80 ಗಂಟೆಗಳ ಕಾಲ ಶರಣ್ಯ ಏನನ್ನೂ ತಿಂದಿಲ್ಲ ಎನ್ನಲಾಗಿದೆ. ಆದರೂ, ಆಕೆ ಪತ್ತೆಯಾದಾಗ ಆಕೆಯ ಮುಖದಲ್ಲಿ ಬಳಲಿಕೆಯ ಲಕ್ಷಣಗಳೇ ಇರಲಿಲ್ಲ. ಒಬ್ಬ ಸಾಮಾನ್ಯ ಮನುಷ್ಯ ಅಷ್ಟು ದಿನ ಊಟ-ನೀರನ್ನೇ ಸರಿಯಾಗಿ ಸೇವಿಸದೆ ಕಾಡಿನಲ್ಲಿ ಅಲೆದಿದ್ದರೆ ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿರಬೇಕಿತ್ತು. ಆದರೆ ಶರಣ್ಯ ಸಲೀಸಾಗಿ ನಡೆದುಕೊಂಡು ಬಂದಿದ್ದು ಹಲವರ ಹುಬ್ಬೇರಿಸಿದೆ.
ಕಾಡಿನಲ್ಲಿ ಒಂದು ಗಂಟೆ ಅಡ್ಡಾಡಿದರೂ ಬಟ್ಟೆಗಳು ಕೆಸರಾಗುತ್ತವೆ ಅಥವಾ ಗಿಡಗಂಟಿಗಳಿಗೆ ಸಿಲುಕಿ ಹರಿಯುತ್ತವೆ. ಆದರೆ, ಮೂರು ರಾತ್ರಿಗಳ ಕಾಲ ಕಾಡಿನಲ್ಲಿದ್ದ ಶರಣ್ಯ ಧರಿಸಿದ್ದ ಬಟ್ಟೆಗಳು ಸ್ವಲ್ಪವೂ ಕೊಳೆಯಾಗಿರಲಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಕೆ ಕಾಡಿನಲ್ಲೇ ಇದ್ದಳಾ ಅಥವಾ ಬೇರೆ ಎಲ್ಲಾದರೂ ಸುರಕ್ಷಿತವಾಗಿದ್ದಳಾ ಎಂಬ ಪ್ರಶ್ನೆ ಉದ್ಭವಿಸಿದೆ.
ದಟ್ಟ ಕಾಡಿನಲ್ಲಿ ಕಾಡುಪ್ರಾಣಿಗಳ ನಡುವೆ ಏಕಾಂಗಿಯಾಗಿ ಕಳೆಯುವುದು ಅತಿ ದೊಡ್ಡ ಸಾಹಸ. ಜೀವ ಉಳಿಸಿಕೊಳ್ಳುವುದೇ ಕಷ್ಟವಿರುವಾಗ, ಆಕೆ ಪತ್ತೆಯಾದ ಬಳಿಕ ಆಕೆಯ ಮುಖದಲ್ಲಿ ಭಯದ ಬದಲು ನಿರಾಳತೆ ಇತ್ತು. ಇದನ್ನು ಕಂಡ ಸ್ಥಳೀಯರು ಮತ್ತು ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ತರಾತುರಿಯಲ್ಲಿ ಕೇರಳಕ್ಕೆ ರವಾನೆ ಯಾಕೆ?
ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಶರಣ್ಯಳನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿ, ತಕ್ಷಣವೇ ಕೇರಳಕ್ಕೆ ಕಳುಹಿಸಿಕೊಡಲಾಯಿತು. ಪೊಲೀಸರು ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸದೆ ಇರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ನೂರಾರು ಸಿಬ್ಬಂದಿ ಮತ್ತು ಸ್ಥಳೀಯರು ಪ್ರಾಣದ ಹಂಗು ತೊರೆದು ಕಾಡಿನಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಆಕೆಯ ಹೇಳಿಕೆ ಪಡೆಯುವಲ್ಲಿ ಪೊಲೀಸರು ತೋರಿದ ಅವಸರ ಯಾಕೆ ಎಂಬ ಪ್ರಶ್ನೆ ಮೂಡಿದೆ.
ಶರಣ್ಯ ಪತ್ತೆಯಾದ ಕೂಡಲೇ ಶಾಸಕ ಎ.ಎಸ್. ಪೊನ್ನಣ್ಣ ಆಕೆಯನ್ನು ತಮ್ಮ ಕಾರಿನಲ್ಲಿ ಕರೆದೊಯ್ದರು. ಅಷ್ಟೇ ಅಲ್ಲದೆ, ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಸ್ವತಃ ವಿಡಿಯೋ ಕಾಲ್ ಮಾಡಿ ಶರಣ್ಯ ಜೊತೆ ಮಾತುಕತೆ ನಡೆಸಿದ್ದು ಕೂಡ ಈ ಪ್ರಕರಣಕ್ಕೆ ಹೆಚ್ಚಿನ ನಿಗೂಢತೆಯನ್ನು ತಂದುಕೊಟ್ಟಿದೆ.
“ಕಾಡಿನ ನಿಗೂಢ ಕಥೆ” ಏನು?
ದಾರಿ ತಪ್ಪಿದ ಶರಣ್ಯ ತನ್ನಿಂತಾನೇ ಹೊರಬಂದಳಾ? ಅಥವಾ ಈ ನಾಪತ್ತೆ ಪ್ರಕರಣದ ಹಿಂದೆ ಬೇರೆಯದೇ ಕಥೆ ಇದೆಯಾ? ನೂರಾರು ಜನರ ಶ್ರಮಕ್ಕೆ ಸಿಕ್ಕ ಪ್ರತಿಫಲ ಬರಿ ಪ್ರಶ್ನೆಗಳಾಗಿಯೇ ಉಳಿದಿವೆ. ಕೊಡಗಿನ ಪೊಲೀಸರು ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡದ ಹೊರತು ಈ “ಕಾಡಿನ ನಿಗೂಢ ಕಥೆ” ಮುಚ್ಚಿಹೋಗುವ ಸಾಧ್ಯತೆಯೇ ಹೆಚ್ಚು.






