ಕುಂಭಾಶಿಯಲ್ಲಿ ಕಾರಿನ ಮಾಲೀಕತ್ವದ ವಿಚಾರ ಬೀದಿ ಗಲಾಟೆ ವಿಕೋಪ: ಮೂವರ ವಿರುದ್ಧ ಪ್ರಕರಣ
Views: 109
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಸಮೀಪದ ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದ ಮುಂಭಾಗದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕಾರಿನ ಮಾಲೀಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಬೀದಿಯಲ್ಲಿ ಗಲಾಟೆ ನಡೆಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿದ ಘಟನೆ ಸಂಭವಿಸಿದೆ.
ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಬೆಂಗಳೂರು ಮೂಲದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮೂಲದ ನಿತೀನ್ ಎಸ್. ಹಾಗೂ ವಿದ್ಯಾ ಪಿ. ದಂಪತಿಗಳು ಜಂಟಿಯಾಗಿ ಹಣ ಹೂಡಿ ಹುಂಡೈ ಐ-20 ಕಾರನ್ನು ಖರೀದಿಸಿದ್ದರು. ಕಾರಿನ ನೋಂದಣಿಯು ವಿದ್ಯಾ ಪಿ. ಅವರ ಹೆಸರಿನಲ್ಲಿದ್ದರೂ, ಕಾರಿನ ಮಾಲೀಕತ್ವದ ಹಕ್ಕಿಗಾಗಿ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.
ಶನಿವಾರ ಮಧ್ಯಾಹ್ನ ಕುಂಭಾಶಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ಈ ವಿಚಾರವು ವಿಕೋಪಕ್ಕೆ ಹೋಗಿದೆ.
ಆರೋಪಿಗಳಾದ ವಿದ್ಯಾ ಪಿ., ನಿತೀನ್ ಅವರ ತಾಯಿ ಸುಕನ್ಯಾ ಹಾಗೂ ಪ್ರಭಾಕರ ಪಿ. ಎಂಬುವವರು ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಕೂಗಾಡುತ್ತಾ ಗಲಾಟೆ ನಡೆಸಿದ್ದಾರೆ. ಈ ವೇಳೆ ವಿದ್ಯಾ ಅವರು ಕಾರಿನ ಮುಂಭಾಗದಲ್ಲಿ ನೆಲದ ಮೇಲೆ ಕುಳಿತು ಈ ಕಾರಿನ ಮಾಲೀಕಳು ನಾನು ಇದು ನನಗೆ ಬೇಕು ಎಂದು ಹಠ ಹಿಡಿದು ಬೊಬ್ಬೆ ಹಾಕಿದ್ದಾರೆ. ಉಳಿದವರು ಕೂಡ ಅವಳೊಂದಿಗೆ ಸಾರ್ವಜನಿಕವಾಗಿ ವಾಗ್ವಾದಕ್ಕಿಳಿದು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುತ್ತಿರುವ ಬಗ್ಗೆ ‘112’ ತುರ್ತು ವಾಹನಕ್ಕೆ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಧಾವಿಸಿದ ಕುಂದಾಪುರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ವಿಲ್ಫ್ರೇಡ್ ಡಿಸೋಜಾ ಮತ್ತು ಸಿಬ್ಬಂದಿ, ಎರಡೂ ಕಡೆಯವರಿಗೆ ಬುದ್ಧಿವಾದ ಹೇಳಿ ಗಲಾಟೆ ಮಾಡದಂತೆ ಸೂಚಿಸಿದ್ದಾರೆ. ಆದಾಗ್ಯೂ, ಮಧ್ಯಾಹ್ನ 14:30 ಗಂಟೆಯ ಸುಮಾರಿಗೆ ಇವರುಗಳು ಮತ್ತೆ ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಬೊಬ್ಬೆ ಹಾಕುತ್ತಾ ಶಾಂತಿ ಭಂಗ ಉಂಟುಮಾಡಿದ್ದಾರೆ.
ದೇವಸ್ಥಾನದಂತಹ ಪವಿತ್ರ ಸ್ಥಳದಲ್ಲಿ ಸಾರ್ವಜನಿಕರಿಗೆ ಮುಜುಗರ ಉಂಟುಮಾಡಿ, ಶಾಂತಿ ಭಂಗ ಮಾಡಿದ್ದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕರ್ತವ್ಯದಲ್ಲಿದ್ದ ಎ.ಎಸ್.ಐ ವಿಲ್ಫ್ರೇಡ್ ಡಿಸೋಜಾ ಅವರು ನೀಡಿದ ದೂರಿನ ಮೇರೆಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.






